

ನೆಲಮಂಗಲ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ರಾ. ಹೆದ್ದಾರಿ 4ರಿಂದ ಮಾಗಡಿ ರಸ್ತೆವರೆಗೂ ಬೆಂಗಳೂರು ಯೋಜನಾ ಪ್ರಾಧಿಕಾರದಿಂದ ನಿರ್ಮಾಣ ಮಾಡುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ನಾಲ್ಕೈದು ವರ್ಷಗಳ ಹಿಂದೆ ರಾ. ಹೆದ್ದಾರಿ 4ರಿಂದ ಮಾಗಡಿ ರಸ್ತೆವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದ್ದು, ಘನವಾಹನಗಳ ಸಂಚಾರದಿಂದ ರಸ್ತೆ ಹದೆಗಟ್ಟಿದೆ. ಸ್ಥಳೀಯರ ಬೇಡಿಕೆಯಂತೆ ಮಾದನಾಯಕನಹಳ್ಳಿ ರಾಷ್ಟ್ರೀಯ ಹೆದ್ದಾರಿ 4ರಿಂದ ಲಕ್ಮೀಪುರ ಮಾರ್ಗವಾಗಿ ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ವರೆಗೆ ಸುಮಾರು 18 ಕಿ.ಮೀ. ರಸ್ತೆಯನ್ನು 39 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪುಣೆಯ ಕಂಪನಿಯೊಂದಕ್ಕೆ ಕಾಮಗಾರಿ ಗುತ್ತಿಗೆ ನೀಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಒಳಚರಂಡಿ, ಎಲ್‌ಇಡಿ ದೀಪಗಳನ್ನೊಳಗೊಂಡಂತೆ ನೂತನ ತಂತ್ರಜ್ಞಾನದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದು, 5 ವರ್ಷದವರೆಗೆ ಕಂಪನಿಯೇ ರಸ್ತೆ ಜವಾಬ್ದಾರಿ ನೋಡಿಕೊಳ್ಳುತ್ತದೆ. ಕಾಮಗಾರಿ ಅವಧಿ ಗರಿಷ್ಠ 6 ತಿಂಗಳ ಗಡುವು ನೀಡಲಾಗಿದ್ದು ಮೊದಲ ಎರಡು ತಿಂಗಳು ಒಳಚರಂಡಿ ಕಾಮಗಾರಿ ನಡೆಯಲಿದೆ ಎಂದರು.
ಬಿಜೆಪಿ ಯಲಹಂಕ ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಯ್ಯ, ಮಾಧ್ಯಮ ಸಂಚಾಲಕ ಅಭಿನಾಶ್ ಗಣೇಶ್, ಮುಖೇಶ್, ಜಿ.ಜೆ.ಮೂರ್ತಿ, ಮುಖಂಡ ರಾಮಮೂರ್ತಿ, ಅರುಣ್ ಕುಮಾರ್, ಕೊಳ್ಳಿಗಾನಹಳ್ಳಿ ವೆಂಕಟೇಶ್, ರವಿಕುಮಾರ್, ಜಿ.ಪಿ. ನಾರಾಯಣಪ್ಪ ಮತ್ತಿತರರು ಇದ್ದರು.
ಹೊಸಬರ ಬಗ್ಗೆ ನಿಗಾವಹಿಸಿ: ಬೆಂಗಳೂರು ನಗರದಾದ್ಯಂತ ಸುಮಾರು 1.5 ಕೋಟಿಗೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಬೆಂಗಳೂರಿಗೆ ಉಗ್ರರು ನುಸುಳಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಅಕ್ಕಪಕ್ಕದ ಮನೆಗೆ ಬಾಡಿಗೆಗೆ ಬಂದ ಜನರ ಬಗ್ಗೆ ನಿಗಾವಹಿಸಬೇಕು ಎಂದು ಶಾಸಕರು ತಿಳಿಸಿದರು.
ಫೆರಿಫೆರಲ್ ರಸ್ತೆ ನಿರ್ಮಾಣ: ಮಾಕಳಿಯಿಂದ ಆರಂಭವಾಗಿ ಹೊಸೂರು ರಸ್ತೆ ಬಳಿ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 73 ಕಿ.ಮೀ. ಉದ್ದದ ಫೆರಿಫೆರಲ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಫೆರಿಫೆರಲ್ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿ ಅವರ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಶಾಸಕರು ತಿಳಿಸಿದರು.