ಕ್ಷೇತ್ರದ ಬಹುತೇಕ ರಸ್ತೆಗಳ ಅಭಿವೃದ್ಧಿಗೆ ಕ್ರಮ

ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಶಾಸಕ ರವೀಂದ್ರ ಶ್ರೀಕಂಠಯ್ಯ ಭೂಮಿ ಪೂಜೆ ನೆರವೇರಿಸಿದರು.
SRP _11-01(a)jpg
Published on

ಶ್ರೀರಂಗಪಟ್ಟಣ: ಕ್ಷೇತ್ರದ ಬಹುತೇಕ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು, ಒಂದು ಹಂತಕ್ಕೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಂಪರ್ಕ ವ್ಯವಸ್ಥೆ ಹಾಗೂ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.


ತಾಲೂಕಿನ ದೊಡ್ಡಪಾಳ್ಯ, ದೊಡ್ಡಪಾಳ್ಯ ದೊಡ್ಡಿ ಹಾಗೂ ಚಿನ್ನನಾಯಕನಹಳ್ಳಿ ಗ್ರಾಮಗಳಲ್ಲಿ ಬುಧವಾರ ಶಾಲೆ ಕಟ್ಟಡ, ಸಂಪರ್ಕ ರಸ್ತೆಗಳು ಹಾಗೂ ಸ್ಮಶಾನಗಳ ಗುರುತು ಮಾಡುವ ಜತೆಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.


ತಾಲೂಕಿನ ದೊಡ್ಡಪಾಳ್ಯ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ಶಾಲೆ ನಿರ್ಮಾಣಕ್ಕೆ 30 ಲಕ್ಷ ರೂ. ಹಾಗೂ ಗ್ರಾಮದಲ್ಲಿ 1.20 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ತಡವಾಗಿತ್ತು. ಈಗಾಗಲೇ ಸರ್ಕಾರದಿಂದ ಅನುದಾನವನ್ನು ತರಲಾಗಿದ್ದು, ಬುಧವಾರದಿಂದಲೇ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇನ್ನು ಗ್ರಾಮದಲ್ಲಿ ಸರಿಯಾದ ಸ್ಥಳ ಸಿಗದೆ ಸ್ಮಶಾನಕ್ಕೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಭೂಮಿ ಮಂಜೂರು ಮಾಡಿಸಿಕೊಂಡು ಆ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರ ಬಳಕೆಗೆ ನೀಡಲಾಗುವುದು ಎಂದು ಭರವಸೆ ನೀಡಿದರು.


ದೊಡ್ಡಪಾಳ್ಯ ದೊಡ್ಡಿ ಸಮೀಪ ಗ್ರಾಮದ 200 ಎಕರೆಗಳಿಗೂ ಅಧಿಕ ಕೃಷಿ ಭೂಮಿಗಳಿಗೆ ತೆರಳಲು ಸರಿಯಾದ ರಸ್ತೆ ವ್ಯವಸ್ಥೆ ಇರದೆ ರೈತರು ಜಾನುವಾರು, ಕೃಷಿ ಪರಿಕರ ಹಾಗೂ ಬೆಳೆಗಳ ಸಾಗಣೆಗೆ ಸಮಸ್ಯೆ ಎದುರಿಸುತ್ತಿದ್ದರು. ತಾಲೂಕು ಆಡಳಿತ ಹಾಗೂ ಗ್ರಾಮದ ರೈತರ ಸಹಕಾರದೊಂದಿಗೆ ಕೃಷಿ ಭೂಮಿ ಪಕ್ಕದಲ್ಲಿನ ಈಶ್ವರನ ಹಳ್ಳ ನಾಲೆ ಪಕ್ಕದ ಸರ್ವೇ ನಂ.84ರಲ್ಲಿನ ಸರ್ಕಾರಿ ಖರಾಬು ಸ್ಥಳದ ಜತೆಗೆ ರೈತರೂ ಸ್ವಲ್ಪ ಭೂಮಿಯನ್ನು ಸ್ವಯಂಪ್ರೇರಣೆಯಿಂದ ನೀಡಿದ ಹಿನ್ನೆಲೆ 1 ಕಿಮೀ ಉದ್ದದ 35 ಅಡಿ ಅಗಲ ರಸ್ತೆಯನ್ನು ನಿರ್ಮಿಸಿಕೊಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.


ದೊಡ್ಡಪಾಳ್ಯ ಗ್ರಾಮದ ಮುಖಂಡರಾದ ಮಹೇಶ್, ಡಿ.ಎಂ.ರವಿ, ಸೋಮಶೇಖರ್, ಜಯರಾಮೇಗೌಡ, ಮೋಹನ್‌ಕುಮಾರ್, ಸ್ವಾಮಿಗೌಡ, ತಿಮ್ಮಯ್ಯ, ಕೆಂಪಯ್ಯ, ಮಾಯೀಗೌಡ, ಚೆನ್ನಪ್ಪ, ಯುವ ಮುಖಂಡರಾದ ಧನಂಜಯ್ಯ, ರಂಜನ್, ಸಾಗರ್, ಅಲ್ಲಾಪಟ್ಟಣ ರವೀಂದ್ರ, ಗಂಗಾಧರ್ ಇತರರು ಇದ್ದರು.

ಪಡಿತರ ಉಪಕೇಂದ್ರ ತೆರೆಯಲು ಸೂಚನೆ: ಪಡಿತರ ದಿನಸಿ ಪಡೆಯಲು 2 ಕಿ.ಮೀ. ದೂರದ ಮರಳಗಾಲ ಗ್ರಾಮಕ್ಕೆ ಅಲೆಯಬೇಕಿದೆ. ಇದರಿಂದ ಗ್ರಾಮದ ಮಹಿಳೆಯರು, ವೃದ್ಧರು ಅಲ್ಲಿಗೆ ತೆರಳಿ ದಿನಸಿ ಹೊತ್ತು ತರಲು ಎದುರಿಸುತ್ತಿದ್ದ ಸಮಸ್ಯೆಯನ್ನು ತಾಲೂಕಿನ ಚಿನ್ನನಾಯಕನಹಳ್ಳಿ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಚಿನ್ನನಾಯಕನಹಳ್ಳಿ ಗ್ರಾಮದಲ್ಲೇ ಪಡಿತರ ವಿತರಣೆಯ ಉಪಕೇಂದ್ರ ತೆರೆಯಲು ಆಹಾರ ಶಿರಸ್ತೇದಾರ್ ರಮಾಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net