

ಕೆ.ಆರ್.ನಗರ: ಕೆಲವರು ಚುನಾವಣೆಯಲ್ಲಿ ಮತದಾರರನ್ನು ದೇವರೆಂದು ಹೇಳಿ ಮತ ಪಡೆಯಲು ಕೆಲಸ ಮಾಡುತ್ತಾರೆ. ಆದರೆ ಚುನಾವಣೆಯ ನಂತರ ಕಾಣೆಯಾಗುತ್ತಾರೆ. ಮತದಾರರಿಗೆ ನಿರಂತರವಾಗಿ 5 ವರ್ಷಗಳ ಕಾಲ ಕೆಲಸ ಮಾಡುವ ಶಾಸಕ ಎಂದರೆ ಅದು ಸಾ.ರಾ.ಮಹೇಶ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.
ತಾಲೂಕಿನ ಕೆಗ್ಗೆರೆ ಗ್ರಾಮದ ಬಳಿ ಶಾಸಕ ಸಾ.ರಾ. ಮಹೇಶ್ ಅವರಿಂದ ನೂತನವಾಗಿ ನಿರ್ಮಿಸಲಾಗಿರುವ ಸಾ.ರಾ.ನಿಧಿ ಗಾರ್ಮೆಂಟ್ಸ್ ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ 64 ಸಾವಿರ ಮಹಿಳೆೆಯರನ್ನು ಷೇರುದಾರರಾಗಿ ಮಾಡಿಕೊಂಡು ಕೋಟ್ಯಂತರ ರೂ. ಖರ್ಚು ಮಾಡಿ ಗಾರ್ಮೆಂಟ್ಸ್ ನಿರ್ಮಿಸಿರುವುದು, ಕೋವಿಡ್ ಸಂದರ್ಭದಲ್ಲಿ 70 ಸಾವಿರ ಕುಟುಂಬಗಳಿಗೆ ಫುಡ್‌ಕಿಟ್ ವಿತರಣೆ, ಪ್ರತಿ ವರ್ಷ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಸೇರಿದಂತೆ ಅಪಾರ ಜನಸೇವೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಕಾರಿನಲ್ಲೇ ಹಾರೆ, ಗುದ್ದಲಿ: ಸಾ.ರಾ.ಮಹೇಶ್ ಕಾರಿನಲ್ಲೆ ಹಾರೆ, ಗುದ್ದಲಿ, ಪಿಕಾಸಿ ಇಟ್ಟುಕೊಂಡಿದ್ದಾರೆ ಅನಿಸುತ್ತದೆ. ಕ್ಷೇತ್ರದಲ್ಲಿ ಯಾರೇ ಕೇಳಿದರೂ ಅಲ್ಲೇ ಕಾರಿನಿಂದ ಸಲಕರಣೆಗಳನ್ನು ತೆಗೆದು ಭೂಮಿಪೂಜೆ ನೇರವೇರಿಸುತ್ತಾರೆ. ಇಂತಹ ಅಭಿವೃದ್ಧಿ ಕಾಳಜಿ ಇರುವ ವ್ಯಕ್ತಿಯನ್ನು ಶಾಸಕನಾಗಿ ಪಡೆದ ಕ್ಷೇತ್ರದ ನೀವೇ ಧನ್ಯರು. ಸಾ.ರಾ.ಮಹೇಶ್ ರಾಜಕಾರಣಕ್ಕೆ ಬರದಿದ್ದರೆ ಜಿಲ್ಲೆಯಲ್ಲಿ ನಂ.1 ಉದ್ಯಮಿಯಾಗುತ್ತಿದ್ದರು ಎಂದರು.
ಅನುಕಂಪ ಗಿಟ್ಟಿಸುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ: ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋದ, ಬಂದಲೆಲ್ಲ ಜನರ ಕಾಲಿಗೆ ಬಿದ್ದು ನಾನು ಎರಡು ಬಾರಿ ಸೋತಿದ್ದೇವೆ ಎಂದು ಅನುಕಂಪ ಗಿಟ್ಟಿಸಲು ಹೊರಟಿದ್ದಾರೆ. ಆದರೆ ಕ್ಷೇತ್ರಕ್ಕೆ ಇವರ ಕೊಡುಗೆ ಏನು? ಇವರನ್ನು ಚುನಾವಣೆಗೆ ನಿಲ್ಲಿ ಎಂದು ಜನ ಒತ್ತಾಯ ಮಾಡುತಿದ್ದಾರೆಯೇ? ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ. ರವಿಶಂಕರ್ ವಿರುದ್ಧ ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರು ಕಳಪೆ ಕೊಡುಗೆಗಳನ್ನು ನೀಡಿ ಮತದಾರರನ್ನು ಖರೀದಿಸಲು ಹೊರಟಿದ್ದಾರೆ. ಕೇವಲ ಚುನಾವಣೆ ಸಮಯದಲ್ಲಿ ಕುಕ್ಕರ್, ಸೀರೆ, ತವಾ ಹಂಚುವುದು ಸರಿಯಲ್ಲ. ಸಾ.ರಾ. ಮಹೇಶ್ ಅವರಂತೆ ನಿರಂತರವಾಗಿ 19 ವರ್ಷಗಳಿಂದ ರಂಜಾನ್ ಕಿಟ್, ಕ್ರಿಸ್‌ಮಸ್ ಕಿಟ್, ಸಂಕ್ರಾಂತಿ ಉಡುಗೊರೆ ನೀಡಬೇಕು ಎಂದು ಸವಾಲು ಹಾಕಿದರು.
ಶಾಸಕ ಸಾ.ರಾ.ಮಹೇಶ್, ಮಾಗಡಿ ಶಾಸಕ ಮಂಜು, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಮೂಳೆತಜ್ಞ ಡಾ.ಮೆಹಬೂಬ್ ಖಾನ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಸಾರಾ ಮಹೇಶ್ ಪತ್ನಿ ಅನಿತಾ, ಪುತ್ರ ಡಾ.ಧನುಷ್, ತಂದೆ ರಾಮೇಗೌಡ, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಪುರಸಭಾ ಸದಸ್ಯರಾದ ಸಂತೋಷ್‌ಗೌಡ, ಉಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.