ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ

05 gkp 04
Published on

ಗೋಣಿಕೊಪ್ಪಲು: ನನ್ನ ಮುಂದಿನ 5 ವರ್ಷದ ಅವಧಿ ಕ್ಷೇತ್ರ ಹಾಗೂ ಜನರ ಅಭಿವೃದ್ಧಿಗೆ ಮೀಸಲಾಗಿರುತ್ತದೆ. ಜನರು ಕೊಟ್ಟ ತೀರ್ಪಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತೇನೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.

ಗೋಣಿಕೊಪ್ಪಲುವಿನ ಇಗ್ಗುತ್ತಪ್ಪ ಕೊಡವ ಸಂಘದ ಸಭಾಂಗಣದಲ್ಲಿ ಶನಿವಾರ ಇಗ್ಗುತ್ತಪ್ಪ ಕೊಡವ ಸಂಘ ಹಾಗೂ ಗೋಣಿಕೊಪ್ಪ ಕೊಡವ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚುನಾವಣೆ ಮೇ 13ರಂದು ಮುಗಿದಿದೆ. ಪರ-ವಿರೋಧಗಳು ಅಂದಿಗೆ ಕೊನೆಯಾಗಿದೆ. ಮುಂದೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಉದ್ದೇಶವಾಗಿದೆ. ಚುನಾವಣೆ ವೇಳೆ ಮನಸ್ಸಿಗೆ ನೋವುಂಟಾಗುವ ಪ್ರಸಂಗಗಳು ನಡೆದಿದ್ದವು. ಅದನ್ನು ಮರೆಯುವ ಪ್ರಯತ್ನ ಮಾಡಿದರೂ ಮರೆಯಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಚಿಂತನೆಯಲ್ಲಿ ತಮ್ಮ ಸಲಹೆ ಸೂಚನೆಗಳು ನಿರಂತರವಾಗಿರಲಿ. ಸದಾ ನಾನು ನಿಮ್ಮೊಂದಿಗಿರುವೆ ಎಂದು ಭರವಸೆ ನೀಡಿದರು.

ಕೊಡವ ಸಮಾಜದ ಸ್ಥಾಪಕ ಸದಸ್ಯ ಅಜ್ಜಿನಿಕಂಡ ಮಹೇಶ್ ಮಾತನಾಡಿ, ಕಳೆದ 20 ವರ್ಷಗಳಿಂದ ಉತ್ತಮ ಶಾಸಕರಿಗಾಗಿ ಎದುರು ನೋಡುತ್ತಿದ್ದೆವು. ಇದೀಗ ಕ್ಷೇತ್ರದ ಜನರ ಸೇವೆಗಾಗಿ ಅಜ್ಜಿಕುಟ್ಟಿರ ಕುಟುಂಬದಿಂದ ಪೊನ್ನಣ್ಣ ಆಗಮಿಸಿದ್ದಾರೆ. ಸಾಕಷ್ಟು ಒತ್ತಡದ ನಡುವೆ ಜನರ ಸೇವೆಗಾಗಿ ಮುಂದೆ ಬಂದಿದ್ದಾರೆ. ಇವರೊಂದಿಗೆ ನಾವು ಕೈಜೋಡಿಸಬೇಕು ಎಂದರು.

ಕೊಡವ ಸಮಾಜದ ಕಾರ್ಯದರ್ಶಿ ಸಣ್ಣುವಂಡ ವಿಶ್ವನಾಥ್ ಮಾತನಾಡಿ, ಗೋಣಿಕೊಪ್ಪದಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಕೊಡವ ಸಮಾಜ ನಿರ್ಮಾಣವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 75 ಲಕ್ಷ ರೂ. ಅನುದಾನ ನೀಡಿದ್ದಾರೆ. ದಾನಿಗಳ ಸಹಾಯದಿಂದ 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಪೂರ್ಣ ಕಟ್ಟಡ ನಿರ್ಮಾಣಕ್ಕೆ 7 ಕೋಟಿ ರೂ. ಯೋಜನೆ ಸಿದ್ಧವಾಗಿದೆ. ಶಾಸಕರು ಮನವಿ ಸ್ವೀಕರಿಸಿ ಅನುದಾನ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಇಗ್ಗುತ್ತಪ್ಪ ಕೊಡವ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ದೇವಯ್ಯ ಮಾತನಾಡಿ, ದಾನಿಗಳು ನೀಡಿದ 7 ಸೆಂಟ್ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದೇವೆ. ಮೇಲಂತಸ್ತಿನ ಕಟ್ಟಡ ನಿರ್ಮಾಣವಾಗಬೇಕಿದೆ. ಅ ನಿಟ್ಟಿನಲ್ಲಿ ಶಾಸಕರು ಅನುದಾನ ಮಂಜೂರು ಮಾಡಿಕೊಡಬೇಕೆಂದರು. ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಕ್ಕೆರ ಪಿ.ಸೋಮಯ್ಯ ಮಾತನಾಡಿದರು. ಗೋಣಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಅಜ್ಜಿಕುಟ್ಟಿರ ಸಿ.ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಸಿ.ಡಿ. ಮಾದಪ್ಪ, ಸಂಘದ ಪದಾಧಿಕಾರಿಗಳಾದ ಅಯ್ಯಣ್ಣ, ಚೋನಿರ ಸತ್ಯ, ಚೇಂದಂಡ ಸುಮಿ ಸುಬ್ಬಯ್ಯ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net