

ಮೂಗೂರು: ಸರಳ, ಸಜ್ಜನ ಸಾಮಾಜಿಕ ಕಳಕಳಿಯುಳ್ಳ ಡಾ.ಎಂ.ರೇವಣ್ಣ ಅವರನ್ನು ಕ್ಷೇತ್ರದ ಮತದಾರರು ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
ಮೂಗೂರು ಗ್ರಾಮದಲ್ಲಿ ಶನಿವಾರ ಪ್ರಚಾರ ರಥದ ಮೂಲಕ ಮೆರವಣಿಗೆಯಲ್ಲಿ ಸಾಗಿ ಶ್ರೀತಿಬ್ಬಾದೇವಿ ದೇವಸ್ಥಾನದ ಬಳಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ಮಾದರಿಯಾಗುವಂತಹ ಅಭಿವೃದ್ಧಿ ಕೆಲಸಗಳನ್ನು ದೇಶಾದ್ಯಂತ ಮಾಡುತ್ತಿದ್ದಾರೆ.ವಿಶ್ವದ ನಾನಾ ಭಾಗಗಳಲ್ಲಿ ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ಕೊಂಡಾಡುತ್ತಿದ್ದು ಭಾರತ ಪ್ರಕಾಶಿಸುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹ ಬಿಜೆಪಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಇಳಿ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಿದರು ಎಂದರು.
ಕಾಂಗ್ರೆಸ್ ಪಕ್ಷದಿಂದ ಸುಭದ್ರ ಆಡಳಿತ ನೀಡಲು ಸಾಧ್ಯವಿಲ್ಲ. ಈಗಾಗಲೇ ಅಧಿಕಾರವಿಲ್ಲದೆ ಸೋತು ಸುಣ್ಣವಾಗಿದ್ದಾರೆ.ಇಡೀ ದೇಶದಲ್ಲೇ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.ಅಧಿಕಾರದಲ್ಲಿದ್ದಾಗ ಅದರ ಮಿತಿಮೀರಿದ ಭ್ರಷ್ಟಾಚಾರದಿಂದ ಬೇಸತ್ತು ಜನತೆ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿಯನ್ನು ಅಭೂತ ಪೂರ್ವವಾಗಿ ಗೆಲ್ಲಿಸಿದ ರಾಷ್ಟ್ರದ ಜನತೆ ಮೋದಿ ಅವರ ಅಭಿವೃದ್ಧಿಯನ್ನು ಬೆಂಬಲಿಸಿ ಮತ್ತೊಮ್ಮೆ ಅವಕಾಶ ನೀಡಿದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೇಶದ ಚಿತ್ರಣವನ್ನೇ ಬದಲಿಸಿದ ಧೀಮಂತ ನಾಯಕ ನರೇಂದ್ರ ಮೋದಿ ಅವರು ಎಂದು ಬಣ್ಣಿಸಿದರು.
ತಿ.ನರಸೀಪುರ ಕ್ಷೇತ್ರಕ್ಕೆ ಉತ್ತಮ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿದ್ದು, ನಿಮ್ಮದೇ ಕ್ಷೇತ್ರದವರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ತಾವಿರುವ ಸ್ಥಳಗಳಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ಉತ್ತಮ ಹೆಸರು ಪಡೆದಿದ್ದು ಈ ಬಾರಿ ಇವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷವನ್ನು ಬಲಪಡಿಸಬೇಕೆಂದು ಮನವಿ ಮಾಡಿದರು.
ಅಪಾರ ಸಂಖ್ಯೆಯ ಮಹಿಳೆಯರು ರೋಡ್ ಶೋ ನಲ್ಲಿ ಭಾಗಿಯಾಗಿ ಬೆಂಬಲ ಸೂಚಿಸುವ ಮೂಲಕ ಗಮನ ಸೆಳೆದರು. ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಿಂದ ದೇವಾಲಯದ ಮುಖ್ಯರಸ್ತೆಯ ಆವರಣದವರೆಗೂ ಕಿಕ್ಕಿರಿದು ಸೇರಿದ ಜನಸ್ತೋಮ. ಬಿ.ವೈ.ವಿಜಯೇಂದ್ರ ಅವರನ್ನು ನೋಡಲು ಅವರ ಅಭಿಮಾನಿಗಳು ತಾಲೂಕು ಸೇರಿದಂತೆ ವರುಣ ವಿಧಾನ ಸಭಾ ಕ್ಷೇತ್ರದಿಂದಲೂ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕೆ.ಸಿ.ಲೋಕೇಶ್‌ನಾಯಕ್, ಜಯಣ್ಣ, ಮಾದಪ್ಪ, ಗೌಡರ್ ಪ್ರಕಾಶ್, ಕುಮಾರಸ್ವಾಮಿ, ಅರವಿಂದ, ಕರೋಹಟ್ಟಿ ಮಹದೇವಯ್ಯ, ಎಂ.ಪಿ.ಛಾಯಾಕುಮಾರ್, ತೋಟದಪ್ಪ ಬಸವರಾಜು, ಕುರುಬೂರು ಕೆ.ಜಿ.ವೀರಣ್ಣ, ಹೋಟೆಲ್ ಪುಟ್ಟಸ್ವಾಮಿ, ಸಿದ್ದರಾಜು, ಮೋಹನ್, ಶೇಖರ್, ಕೆಬ್ಬೆಹುಂಡಿ ಶಿವಕುಮಾರ್, ಕೊತ್ತೇಗಾಲ ಕಿಟ್ಟಿ, ದಯಾನಂದ ಪಟೇಲ್, ಬನ್ನೂರು ರಾಮಚಂದ್ರ, ಕರೋಹಟ್ಟಿ ಬಸವರಾಜು, ನಿಲಸೋಗೆ ಬಸವರಾಜು, ತ್ರಿವೇಣಿ ನಗರ ಸಿದ್ದರಾಜು, ಭಾಗ್ಯಮ್ಮ, ವರುಣಾ ಸದಾನಂದ, ಮಹದೇವಸ್ವಾಮಿ, ಸುನಿಲ್ ಕುಮಾರ್ ಇತರರಿದ್ದರು.