

ಮಾಲೂರು:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಒಂದುವರೆ ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ಸಹಕಾರ ಮತ್ತು ನಮ್ಮ ಪ್ರಯತ್ನದಿಂದ ತಾಲೂಕಿನ ಅಭಿವೃದ್ಧಿಗೆ 2,008 ಕೋಟಿ ರೂ.ಗಳ ಅನುದಾನ ಲಭಿಸಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶಾಸಕರ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಕೈಗಾರಿಕಾ ಕಾರಿಡಾರ್ ಯೋಜನೆಗೆ ರಾಜ್ಯ ಸರ್ಕಾರ 3,190 ಕೋಟಿ ರೂ.ಗಳ ಅನುಮೋದನೆ ನೀಡಿದ್ದು, ಈ ಮೊತ್ತದ ಅನುದಾನದಲ್ಲಿ 2,008 ಕೋಟಿ ರೂ.ಗಳ ಅನುದಾನವನ್ನು ಮಾಲೂರು ತಾಲೂಕಿನ ಅಭಿವೃದ್ಧಿಗೆ ಸಿಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಈಗ ಮಾಲೂರು ತಾಲೂಕಿಗೆ ಬಂದಿರುವ ಅನುದಾನದಲ್ಲಿ ಪಟ್ಟಣದಲ್ಲಿ ಮೂರುವರೆ ಕಿಲೋ ಮೀಟರ್ ಮೇಲ್ಸೆತುವೆ, ನಾಲ್ಕು ಪಥಗಳ ರಸ್ತೆ ಹಾಗೂ ಮಾಲೂರಿನಿಂದ ಹೊಸಕೋಟೆಯವರೆಗೂ ಕಾಂಕ್ರಿಟ್ ರಸ್ತೆಗಳ ಕಾಮಗಾರಿಗೆ ಸರ್ಕಾರದ ಆದೇಶದಂತೆ ಮೂರು ವರ್ಷಗಳಲ್ಲೆ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರದಿಂದ ಬಂದಿರುವ 2,008 ಕೋಟಿ ರೂ.ಗಳ ಅನುದಾನ ಹೊರತುಪಡಿಸಿ ನಾನು ಚುನಾವಣೆಯಲ್ಲಿ ಎರಡನೇ ಬಾರಿ ಶಾಸಕನಾದ ಒಂದುವರೆ ವರ್ಷದಿಂದ 21 ಕೋಟಿ ರೂಗಳ ವೆಚ್ಚದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿ, 36 ಕೋಟಿ ರೂ. ವೆಚ್ಚದಲ್ಲಿ ಮಾಲೂರು ದೊಡ್ಡ ಕೆರೆ ಅಭಿವೃದ್ಧಿ ಹಾಗೂ ಪಟ್ಟಣದ ಎಲ್ಲ ಪುರಸಭಾ ವ್ಯಾಪ್ತಿಯಲ್ಲಿರುವ ವಾರ್ಡ್ಗಳನ್ನು ಅಭಿವೃದ್ಧಿಪಡಿಸಲು 33 ಕೋಟಿ ರೂ. ಮತ್ತು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗ ಮಂದಿರ ಅಭಿವೃದ್ಧಿ, ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಲಾಗುವುದು. ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನಿವೇಶನದ ಜತೆಗೆ ಉಚಿತ ಮನೆಗಳನ್ನು ಸಹ ನೀಡಲಾಗುವುದು. ತಾಲೂಕಿನಾದ್ಯಂತ ರಸ್ತೆಗಳ ಅಭಿವೃದ್ಧಿ ಮತ್ತು ಶಾಲಾ ಕಟ್ಟಡಗಳ ಅಭಿವೃದ್ಧಿ ಸೇರಿ ಒಟ್ಟಾರೆ 3,000 ಕೋಟಿ ರೂ.ಗಳ ಅಭಿವೃದ್ಧಿಯನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಟೀಕೆ ಬಿಟ್ಟು, ಸಲಹೆ ನೀಡಿ: ಮಾಲೂರು ಯೋಜನಾ ಪ್ರಾಧಿಕಾರದ ಸಹಕಾರದಿಂದ ಮಾಲೂರು ಪಟ್ಟಣದಲ್ಲಿ ವಿಶೇಷ ಅಭಿವೃದ್ದಿ ಮಾಡಲಾಗುತ್ತಿದೆ. ತಾಲೂಕಿನಲ್ಲಿ ವಿರೋಧ ಪದವರು ನನ್ನ ಆಡಳಿತದ ಬಗ್ಗೆ ಟೀಕೆ ಮಾಡಿದರೆ ಅದನ್ನು ಸಲಹೆಯಾಗಿ ಸ್ವೀಕರಿಸುತ್ತೇನೆ. ಆದರೆ, ತಾಲೂಕಿನ ಪೂರ್ವ&ಪಶ್ಚಿಮ ದಿಕ್ಕುಗಳು ಗೊತ್ತಿಲ್ಲದೆ ಬೇರೆಯವರು ಎಲ್ಲಿಂದಲೋ ಬಂದು ನನ್ನ ಬಗ್ಗೆ ಟೀಕೆ ಮಾಡಿದರೆ ಉತ್ತರ ನೀಡುವುದಿಲ್ಲ. ತಾಲೂಕಿನ ಜನತೆ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡು ತಾಲೂಕನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿ ಎಂದು ಶಾಸಕರು ತಿಳಿಸಿದರು.ಪುರಸಭಾ ಸದಸ್ಯ ಬುಲೆಟ್ ವೆಂಕಟೇಶ್, ಇಮ್ತಿಯಾಸ್ಖಾನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯ ಎ.ಅಶ್ವತ್ಥ್ರೆಡ್ಡಿ ಇತರರಿದ್ದರು.