ಕ್ಷೇತ್ರದ 8 ಕೆರೆಗಳಿಗೆ ಭದ್ರಾ ನೀರು ಹರಿಸಿ

Sabhe
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ತಾಲೂಕಿನಲ್ಲಿ ಹೆಚ್ಚುವರಿಯಾಗಿ 8 ಕೆರೆಗಳಿಗೆ ನೀರು ತುಂಬಿಸಲು ಕ್ರಮವಹಿಸಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.

ವಿಧಾನಸೌಧದಲ್ಲಿ ಈಚೆಗೆ ನಡೆದ ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ಮಾತನಾಡಿದ ಶಾಸಕರು, ಸರ್ಕಾರದ ಯಾವುದೇ ಯೋಜನೆ ಬಂದರು ಚಿತ್ರದುರ್ಗದ ಹೆಸರು ಕೇಳಿಬರುತ್ತಿದೆ. ಆದರೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಪ್ರಯೋಜ ಆಗುತ್ತಿಲ್ಲ. ಇದೀಗ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲೂ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಇದನ್ನು ಮೊದಲು ಸರಿಪಡಿಸಬೇಕು ಎಂದು ಗಮನ ಸೆಳೆದರು.

ಈ ಹಿಂದೆ ಕ್ಷೇತ್ರ ವ್ಯಾಪ್ತಿಯ 5 ಕೆರೆಗಳಿಗೆ ನೀರು ಹರಿಸಲು ಸರ್ಕಾರದಿಂದ ಆದೇಶವಾಗಿದೆ. ಆದರೆ, ಉಳಿದ 8 ಕೆರೆಗಳಿಗೆ ನೀರು ತುಂಬಿಸದಿದ್ದರೆ, ಜನರು ಸಮಸ್ಯೆಗೆ ಸಿಲುಕುತ್ತಾರೆ. ಕೂಡಲೇ ಅವುಗಳಿಗೂ ನೀರುಣಿಸಿದರೆ, ಸಾವಿರಾರು ರೈತರ ಬದುಕಿಗೆ ಆಸರೆಯಾಗಲಿದೆ. ಈ ಕುರಿತು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್ ಸಮಸ್ಯೆ ಆಲಿಸಿ ಮಾತನಾಡಿ, ಕ್ಷೇತ್ರದ 8 ಕೆರೆಗಳಿಗೆ ನೀರು ತುಂಬಿಸಲು ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರಲ್ಲದೆ, ಶೀಘ್ರ ನೀರು ತುಂಬಿಸಲು ಆದೇಶಿಸುವ ಭರವಸೆ ನೀಡಿದರು.

ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ ಸೇರಿ ಜಲನಿಗಮ ವ್ಯಾಪ್ತಿಯ ಶಾಸಕರು, ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net