

ರಾಯಚೂರು: ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ಸ್ಥಳೀಯ ಶಾಸಕರ ಕಾರ್ಯಾಲಯದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಲಾನುಭವಿಗಳಿಗೆ ಮೋಟಾರ್ ಮತ್ತು ಸಾಮಗ್ರಿ ವಿತರಿಸಿ ಶನಿವಾರ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಕೆರೆಗಳನು ತುಂಬಿಸುವ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 145 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಅವುಗಳಲ್ಲಿ 30 ಜನರಿಗೆ ಮೋಟಾರ್ ಮತ್ತು ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಬಾಕಿ ಉಳಿದ ಲಾನುಭವಿಗಳಿಗೆ ಶೀಘ್ರ ಸಾಮಗ್ರಿಗಳನ್ನು ನೀಡಲಾಗುವುದು.
ಕ್ಷೇತ್ರದ ಜನರು ಕೃಷಿಯನ್ನು ಅವಲಂಬಿಸಿದ್ದು, ಮಳೆಯಾಶ್ರಿತ ಜಮೀನು ಹೊಂದಿದೆ. ಕೊಳವೆಬಾವಿ ಕೊರೆಸಿದಲ್ಲಿ ಲಘು ನೀರಾವರಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಹಿಂದೆ ಕೊಳವೆಬಾವಿ ಕೊರೆಸಿದ ನಂತರ ಸಾಮಗ್ರಿ ವಿತರಣೆಗೆ ವಿಳಂಬವಾಗುತ್ತಿತ್ತು. 2020-21ನೇ ಸಾಲಿನಲ್ಲಿ ಕೊಳವೆಬಾವಿ ಕೊರೆದ ಮೂರು ತಿಂಗಳಲ್ಲಿಯೇ ಸಾಮಗ್ರಿಗಳನ್ನು ರೈತರಿಗೆ ಹಸ್ತಾಂತರಿಸಲಾಗಿದೆ ಎಂದು ಬಸನಗೌಡ ದದ್ದಲ್ ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಮುಖಂಡರಾದ ಶಿವಪ್ಪ ನಾಯಕ, ಕೆ.ಪಂಪಾಪತಿ, ತಾಯಣ್ಣ ನಾಯಕ, ಜನಾರ್ದನ ಗೌಡ ಉಪಸ್ಥಿತರಿದ್ದರು.