

ಮಳವಳ್ಳಿ: ನನಗೆ ಅಧಿಕಾರವಿಲ್ಲದಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವೊಲಿಸಿ ಕ್ಷೇತ್ರಕ್ಕೆ 7.5 ಕೋಟಿ ರೂ.ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೇನೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ತಿಳಿಸಿದರು.
ತಾಲೂಕಿನ ಬಾಣಸಮುದ್ರ ಸಮೀಪ ಭಾನುವಾರ ಮುಖ್ಯಮಂತ್ರಿ ವಿಶೇಷ ಅನುದಾದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕನಾಗಿ ಶಿಕ್ಷಣ, ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಆದರೆ, ರಾಜಕೀಯ ವಿರೋಧಿಗಳು ಮತದಾರರಿಗೆ ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸಿ ಚುನಾವಣೆಗಳಲ್ಲಿ ಸೋಲುವಂತೆ ಮಾಡಿದರು. ಆದರೂ ಎದೆಗುಂದದೆ ಮತದಾರರ ಋಣ ತೀರಿಸಲು ಇಂದಿಗೂ ಶ್ರಮಿಸುತ್ತಿದ್ದೇನೆ ಎಂದರು.
ಪಕ್ಷಭೇದ ಮಾಡದೆ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ನನ್ನ ಪಕ್ಷ ನಿಷ್ಠೆ, ನಿಷ್ಠಾವಂತ ರಾಜಕಾರಣದ ಸೇವೆ ಗೌರವಿಸಿ ವಿಶೇಷ ಅನುದಾನ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮಿಷಗಳಿಗೆ ಒಳಗಾಗದೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಹೇಳಿದರು.
ಸಿದ್ದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆ, ಬಾಣಸಮುದ್ರ ಗ್ರಾಮದಿಂದ ದಡಮಹಳ್ಳಿ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಲಿಂಗಯ್ಯ, ಹುಸ್ಕೂರು ಶಕ್ತಿ ಕೇಂದ್ರದ ಅಧ್ಯಕ್ಷ ಸಿದ್ದುಗೌಡ, ಗ್ರಾಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಅರ್ಜುನ್, ನಾಗರಾಜು, ಮಾಜಿ ಸದಸ್ಯರಾದ ಜಯರಾಮ್, ಚಿಕ್ಕಸ್ವಾಮಿ, ಮಾದೇವಪ್ಪ, ಶಿವಕುಮಾರ್, ಕುಳ್ಳೇಗೌಡ, ಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ ರಾಜೇಗೌಡ, ಭೂ ನ್ಯಾಯ ಮಂಡಳಿ ಸದಸ್ಯ ಕನ್ನಳ್ಳಿ ಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರೇಮಕುಮಾರಿ, ಜಯರಾಮೇಗೌಡ, ಸಾಗ್ಯ ರಾಜಣ್ಣ, ಬಸವರಾಜು ಇತರರಿದ್ದರು.