ಕ್ಷೇತ್ರ ಮರು ವಿಂಗಡಣೆ ಏರುಪೇರು

ZP bidar
Published on

ಬೀದರ್: ಕ್ಷೇತ್ರ ಮರು ವಿಂಗಡಣೆಯಿಂದಾಗಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾದರೆ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಇಳಿಕೆ ಕಂಡಿದೆ. ಶೀಘ್ರ ನಡೆಯಲಿರುವ ಈ ಎರಡೂ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗವು ಪ್ರಕಟಿಸಿದ ಕ್ಷೇತ್ರ ಮರು ವಿಂಗಡಣೆಯಲ್ಲಿ ಈ ಬದಲಾವಣೆ ಕಂಡಿದೆ.

ಜಿಲ್ಲೆಯಲ್ಲಿ ಪ್ರಸ್ತುತ 34 ಜಿಪಂ ಕ್ಷೇತ್ರಗಳಿವೆ. ಮರು ವಿಂಗಡಣೆಯಿಂದಾಗಿ 7 ಕ್ಷೇತ್ರಗಳು ಹೆಚ್ಚುತ್ತಿರುವ ಕಾರಣ ಇನ್ಮುಂದೆ ಜಿಪಂ ಬಲ 41ಕ್ಕೇರಲಿದೆ. ಜಿಲ್ಲೆಯಲ್ಲಿನ ತಾಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಸದ್ಯ 131 ಇದ್ದು, ಇಲ್ಲಿ 19 ಕ್ಷೇತ್ರಗಳು ಮರೆಯಾಗಲಿದ್ದು, ಇಲ್ಲಿನ ಒಟ್ಟು ಸಂಖ್ಯೆ 112ಕ್ಕೆ ಕುಸಿತ ಕಾಣುತ್ತಿದೆ. ಜಿಲ್ಲೆಯಲ್ಲಿ ಹೊಸದಾಗಿ ಚಿಟಗುಪ್ಪ, ಹುಲಸೂರು ಹಾಗೂ ಕಮಲನಗರ ತಾಲೂಕುಗಳು ರಚನೆ ಆಗಿವೆ. ಹಳ್ಳಿಖೇಡ್(ಬಿ) ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಇವೆಲ್ಲದರ ಪರಿಣಾಮ ಜಿಪಂ, ತಾಪಂಗಳ ಸಂಖ್ಯೆಗಳಲ್ಲಿನ ಏರುಪೇರಿಗೆ ಕಾರಣವಾಗಿದೆ.

ಬೀದರ್ ತಾಲೂಕಿನಲ್ಲಿ 8 ಜಿಪಂ ಮತ್ತು 21 ತಾಪಂ ಕ್ಷೇತ್ರ, ಔರಾದ್ ತಾಲೂಕಿನಲ್ಲಿ 5 ಜಿಪಂ, 13 ತಾಪಂ ಕ್ಷೇತ್ರ, ಭಾಲ್ಕಿ ತಾಲೂಕಿನಲ್ಲಿ 7 ಜಿಪಂ, 19 ತಾಪಂ ಕ್ಷೇತ್ರ , ಹುಮನಾಬಾದ್ ತಾಲೂಕಿನಲ್ಲಿ 4 ಜಿಪಂ, 11 ತಾಪಂ ಕ್ಷೇತ್ರ, ಬಸವಕಲ್ಯಾಣ ತಾಲೂಕಿನಲ್ಲಿ 7 ಜಿಪಂ , 19 ತಾಪಂ ಕ್ಷೇತ್ರಗಳು ಮರು ವಿಂಗಡಣೆಯಿಂದ ದಕ್ಕಿವೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಮಲನಗರ ತಾಲೂಕಿಗೆ 4 ಜಿಪಂ, 9 ತಾಪಂ ಕ್ಷೇತ್ರ, ಚಿಟಗುಪ್ಪ ತಾಲೂಕಿಗೆ 4 ಜಿಪಂ, 9 ತಾಪಂ ಕ್ಷೇತ್ರ ಹಾಗೂ ಹುಲಸೂರು ತಾಲೂಕಿಗೆ 2 ಜಿಪಂ, 11 ತಾಪಂ ಕ್ಷೇತ್ರ ಹಂಚಿಕೆಯಾಗಿವೆ.

ಜಿಲ್ಲಾಡಳಿತದಿಂದ ನೀಡಲಾದ ಗ್ರಾಮೀಣ ಪ್ರದೇಶದ ಜನಸಂಖ್ಯೆ ಆಧಾರದ ಮೇಲೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ಮಾಡಲಾಗಿರುವ ತಿದ್ದುಪಡಿ ಅನ್ವಯ ತಾಲೂಕುವಾರು ಜಿಪಂ ಹಾಗೂ ತಾಪಂ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ ಎಂದು ರಾಜ್ಯ ಚುನಾವಣೆ ಆಯೋಗ ಇತ್ತೀಚೆಗೆ ಹೊರಡಿಸಿದ ರಾಜ್ಯಪತ್ರದಲ್ಲಿ(ಗೆಜೆಟ್ ನಲ್ಲಿ) ತಿಳಿಸಿದೆ.

ಕ್ಷೇತ್ರ ಮರು ವಿಂಗಡಿಸುವಾಗ ಈಗಿರುವ ಗ್ರಾಪಂಗಳು ಒಡೆಯಕೂಡದು. ಪೂರ್ಣ ಗ್ರಾಪಂನ ಗ್ರಾಮಗಳನ್ನು ಒಟ್ಟುಗೂಡಿಸಿ ಹೊಸ ಕ್ಷೇತ್ರ ರಚಿಸಬೇಕು. ಒಂದೇ ಗ್ರಾಪಂಗಳ ಊರುಗಳು ಬೇರೆ, ಬೇರೆ ಕ್ಷೇತ್ರಕ್ಕೆ ಹಂಚಿಕೆಯಾಗದಂತೆ ಎಚ್ಚರಿಕೆ ವಹಿಸಲು ಸಹ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆಯೋಗದ ನಿರ್ದೇಶನದ ಪ್ರಕಾರ ಜಿಲ್ಲಾಡಳಿತ ಮರು ವಿಂಗಡಣೆ ಪ್ರಕ್ರಿಯೆ ಆರಂಭಿಸಿದೆ.

ಕಡಿತಗೊಂಡ 19 ತಾಪಂ ಕ್ಷೇತ್ರ
ಜಿಲ್ಲೆಯ 8 ತಾಲೂಕುಗಳಲ್ಲಿ ಮರು ವಿಂಗಡಣೆ ನಂತರ 19 ತಾಪಂ ಕ್ಷೇತ್ರಗಳು ಕಡಿಮೆಯಾಗಿವೆ. 2016ರಲ್ಲಿ ನಡೆದ ಚುನಾವಣೆ ವೇಳೆ 34 ಜಿಪಂ, 131 ತಾಪಂ ಕ್ಷೇತ್ರಗಳಿದ್ದವು. ಬೀದರ್ 7, ಬಸವಕಲ್ಯಾಣ 7, ಭಾಲ್ಕಿ 6, ಔರಾದ್ 7 ಹಾಗೂ ಹುಮನಾಬಾದ್ ತಾಲೂಕಿನಲ್ಲಿ 7 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 34 ಜಿಪಂ ಕ್ಷೇತ್ರಗಳಿದ್ದವು. ಬೀದರ್ ತಾಲೂಕಿನಲ್ಲಿ 26, ಬಸವಕಲ್ಯಾಣ 28, ಔರಾದ್ 26, ಭಾಲ್ಕಿ 24 ಹಾಗೂ ಹುಮನಾಬಾದ್ ತಾಲೂಕಿನಲ್ಲಿ 27 ಸೇರಿ ಒಟ್ಟು 131 ತಾಪಂ ಕ್ಷೇತ್ರಗಳಿದ್ದವು. ಈ ಬಾರಿ 7 ಜಿಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದ್ದರೆ, 19 ತಾಪಂ ಕ್ಷೇತ್ರ ಕಡಿತಗೊಂಡು 112ಕ್ಕೆ ಕುಸಿದಿದೆ. 2016ರಲ್ಲಿ 5 ಇದ್ದ ತಾಲೂಕುಗಳ ಸಂಖ್ಯೆ ಇದೀಗ 8ಕ್ಕೇರಿದೆ.

ತಾಪಂ ರದ್ದು ಚರ್ಚೆ
ಒಂದೆಡೆ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ನಡೆಯುತ್ತಿದ್ದರೆ ಇನ್ನೊಂದೆಡೆ ತಾಪಂ ವ್ಯವಸ್ಥೆ ರದ್ದುಗೊಳ್ಳಲಿದೆಯೇ ಎಂಬ ಚರ್ಚೆಗಳು ಬಿಗಿ ಹಿಡಿದಿವೆ. ಪಂಚಾಯತ್ ರಾಜ್ ವ್ಯವಸ್ಥೆಯ ಅಡಿಯಲ್ಲಿ ಈಗಿರುವ ತ್ರಿ ಟಯರ್ ಪದ್ಧತಿ ಬದಲಿಸಿ ಕೇವಲ ಜಿಪಂ ಹಾಗೂ ಗ್ರಾಪಂ (ಟು ಟಯರ್)ಪದ್ಧತಿ ಜಾರಿಗೊಳಿಸಿದರೆ ಉತ್ತಮ ಎಂಬ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಹೀಗಾಗಿ ತಾಪಂ ಇರುತ್ತಾ? ಹೋಗುತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ಈ ಚರ್ಚೆಯು ಅನೇಕರಿಗೆ ತಾಪಂ ಬದಲಾಗಿ ಜಿಪಂ ಕಡೆಗೆ ಚಿತ್ತ ಹರಿಸುವಂತೆ ಮಾಡಿದೆ.

ಕ್ರಮೇಣ ಬಿರುಸಾಗುತ್ತಿರುವ
ರಾಜಕೀಯ ಚಟುವಟಿಕೆ

ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ ಸ್ಥಳೀಯ ರಾಜಕೀಯ ಚಟುವಟಿಕೆಗಳು ಸಹ ಬಿರುಸುಗೊಳ್ಳಲಾರಂಭಿಸಿವೆ. ವಿಂಗಡಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕ್ಷೇತ್ರಗಳ ಮೀಸಲಾತಿ ನಿಗದಿ ಆರಂಭವಾಗಲಿದೆ. ರೊಟೇಷನ್ ಪ್ರಕಾರ ಮೀಸಲಾತಿ ಬದಲಾವಣೆ ಆಗಲಿದೆ. ಆದರೆ ಹಲವರು ಕ್ಷೇತ್ರಗಳ ಮೀಸಲಾತಿ ಹೀಗಿರಬಹುದು ಎಂಬ ಲೆಕ್ಕಾಚಾರದಲ್ಲಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಮೀಸಲು ಬದಲಾದರೆ ಬೇರೆ ಕ್ಷೇತ್ರಕ್ಕೆ ಹೋಗುವುದಕ್ಕೂ ಅನೇಕರು ಸಿದ್ಧತೆ ನಡೆಸಿದ್ದಾರೆ. ಮಹಿಳಾ ಮೀಸಲು ಬಂದರೆ ಪತ್ನಿಯರಿಗೆ ಕಣಕ್ಕೆ ತರುವುದಕ್ಕೆ ಯೋಜನೆ ಸಿದ್ಧವಾಗುತ್ತಿವೆ. ಹೀಗಾಗಿ ಜಿಪಂ, ತಾಪಂ ಚುನಾವಣೆ ಬಿಸಿ ಹಳ್ಳಿಗರಿಗೆ ಈಗಿನಿಂದಲೇ ತಟ್ಟಲಾರಂಭಿಸಿದೆ. ಜಿಪಂ ಗದ್ದುಗೆ ಹಿಡಿಯಲು ಈಗ ಸರಳ ಬಹುಮತಕ್ಕೆ 22 ಸ್ಥಾನ ಬೇಕು. ಕಾಂಗ್ರೆಸ್, ಬಿಜೆಪಿ ಈಗಾಗಲೇ ಚುನಾವಣೆ ಸಿದ್ಧತೆ ಆರಂಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net