ಕ್ಷೇತ್ರ ಬಿಡದಿರಲು ಉಸ್ತುವಾರಿಗಳಿಗೆ ಸೂಚನೆ

cong meeting
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಶಿಗ್ಗಾಂವಿ ಉಪ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಕ್ಷೇತ್ರವಾರು ಉಸ್ತುವಾರಿಯಾಗಿರುವ ಸಚಿವರು ಮುಂದಿನ 8 ದಿನಗಳ (ನ.11)ವರೆಗೆ ಕ್ಷೇತ್ರ ತೊರೆಯಬಾರದು ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟ ಸೂಚನೆ ನೀಡಿದೆ.

ಎಐಸಿಸಿ ಕಾರ್ಯದರ್ಶಿ ಹಾಗೂ ಬೆಳಗಾವಿ ವಿಭಾಗೀಯ ಉಸ್ತುವಾರಿ ಮಯೂರ ಜಯಕುಮಾರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಭಾನುವಾರ ಚುನಾವಣೆ ಉಸ್ತುವಾರಿಗಳು ಹಾಗೂ ಪಕ್ಷದ ಪ್ರಮುಖರ ಸಭೆ ನಡೆಯಿತು.

ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 6 ಜಿಪಂ ಹಾಗೂ 3 ಪಟ್ಟಣ ಪಂಚಾಯಿತಿಗಳಿದ್ದು, ಪ್ರತಿ ಕ್ಷೇತ್ರಕ್ಕೆ ಒಬ್ಬರಂತೆ 9 ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಜತೆಗೆ ಪ್ರತಿ ಕ್ಷೇತ್ರಕ್ಕೆ ನಾಲ್ವರು ಶಾಸಕರು ಹಾಗೂ 12 ಜನ ಕೆಪಿಸಿಸಿ ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಇವರೆಲ್ಲರೂ ಬಹಿರಂಗ ಪ್ರಚಾರ ಕೊನೆಗೊಳ್ಳುವವರೆಗೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಗಿದೆ.

ಕ್ಷೇತ್ರದಲ್ಲಿ ಕೈಗೊಂಡಿರುವ ಪ್ರಚಾರ ಕಾರ್ಯಕ್ರಮ ಹಾಗೂ ರಾಜಕೀಯ ಬೆಳವಣಿಗೆ ಬಗ್ಗೆ ಕ್ಷೇತ್ರವಾರು ಉಸ್ತುವಾರಿಯಾಗಿರುವ ಸಚಿವರು ನಿತ್ಯ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ವಕ್ಪ್ ಆಸ್ತಿ ವಿಚಾರ ಹಾಗೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆಂದು ಬಿಜೆಪಿ ಸುಳ್ಳು ಹೇಳುತ್ತಿದೆ. ನಾವೆಲ್ಲ ಚುನಾವಣೆ ಗೆಲ್ಲಬೇಕೆಂಬ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಕ್ಷೇತ್ರದಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ. ಲೋಕಸಭೆ ಚುನಾವಣೆ ವೇಳೆ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿತ್ತು. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲುವ ಅವಕಾಶವಿದೆ. ನಾವೆಲ್ಲ ಶ್ರಮ ವಹಿಸಿ ಕೆಲಸ ಮಾಡೋಣ ಎಂದರು.

ಸಭೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ರಹೀಂ ಖಾನ್, ಶಾಸಕರಾದ ಲಕ್ಷ್ಮಣ ಸವದಿ, ಎನ್.ಎಚ್.ಕೋನರಡ್ಡಿ, ಎಂಎಲ್​ಸಿ ಸಲೀಂ ಅಹ್ಮದ್, ಮಾಜಿ ಎಂಎಲ್​ಸಿ ನಾರಾಯಣಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net