

ಕೆ.ಎಂ.ದೊಡ್ಡಿ: ಯಾವುದೇ ಕಾರಣಕ್ಕೂ ನಾನು ಕ್ಷೇತ್ರ ಬಿಟ್ಟು ಹೆದರಿ ಹೋಗುವುದಿಲ್ಲ, ದಿಟ್ಟತನದಿಂದಲೇ ಪಕ್ಷದಿಂದ ವಿಧಾನಸಭೆ ಚುನಾವಣೆ ಎದುರಿಸುತ್ತೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ಸಮೀಪದ ದೊಡ್ಡರಸಿನಕೆರೆ ಗೇಟ್ ಎಸ್‌ವೈಎಸ್ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ರಂಗಕ್ಕೆ ಅನಿರೀಕ್ಷಿತವಾಗಿ ಬಂದೆ. ಜನರ ಪ್ರೀತಿ, ವಿಶ್ವಾಸದಿಂದ 4 ಬಾರಿ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾದೆ. ಕ್ಷೇತ್ರದ ಜನರ ಸೇವೆ ಮಾಡಲು ಸದಾ ಸಿದ್ಧ ಎಂದು ಭಾವುಕರಾಗಿ ನುಡಿದರು.
ರಾಜಕೀಯದಿಂದ ನಿವೃತ್ತಿ ಹೊಂದಬೇಕೆಂದು ಬಯಸಿದ್ದು ನಿಜ. ಆದರೆ ಕ್ಷೇತ್ರದ ಜನತೆ ಒತ್ತಡ ಹೇರಿದ ಕಾರಣ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಡಿ.ಎ.ಕೆರೆ ಹೊನ್ನೇಗೌಡ ಮಾತನಾಡಿ, ಕ್ಷೇತ್ರದಲ್ಲಿ ಕೆಲ ನಾಯಕರು ಯುವಕರಿಗೆ ಆಮಿಷ ಒಡ್ಡಿ ದಾರಿ ತಪ್ಪಿಸುತ್ತಿದ್ದಾರೆ. ಹಣ ಇದ್ದರೆ ಜನರನ್ನೇ ಖರೀದಿ ಮಾಡಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ. ಯಾರೂ ಒಂದು ದಿನದ ಆಮಿಷಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕೆಸ್ತೂರು ಬಿಳಿಯಪ್ಪ, ಎಚ್.ಎಂ. ಮರಿಮಾದೇಗೌಡ, ಸ್ವಾಮೀಗೌಡ, ಪುರಸಭಾ ಸದಸ್ಯ ಮಹೇಶ್ ಮತ್ತಿತರರಿದ್ದರು.