

ಮಂಡ್ಯ : ನಾನು ಯಾವುದೇ ದ್ವೇಷ ರಾಜಕಾರಣ ಮಾಡುವುದಿಲ್ಲ. ಕ್ಷೇತ್ರದಲ್ಲಿನ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ನನ್ನ ಬಳಿ ಬರಲಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಸೋಮವಾರ ಚಿಕ್ಕರಸಿನಕೆರೆ ಹೋಬಳಿಯ ಶಾಸಕರ ಕಚೇರಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಕುಂದುಕೊರತೆಗಳನ್ನು ತಿಳಿಸಲು ಮದ್ದೂರಿಗೆ ಬರಬೇಕಿತ್ತು. ಇದರಿಂದ ಅವರಿಗೆ ಸಮಯ ವ್ಯರ್ಥವಾಗುತಿತ್ತು. ಇದನ್ನು ಮನಗೊಂಡು ಕೆ.ಎಂ.ದೊಡ್ಡಿಯಲ್ಲಿ ಕಚೇರಿ ತೆರದಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕೆ.ಎಂ.ದೊಡ್ಡಿಗೆ ಹೆಚ್ಚಿನ ಜನರು ಬರುವುದರಿಂದ ಪಟ್ಟಣದ ಹೃದಯ ಭಾಗದಲ್ಲಿ ಇಂದಿರಾ ಕ್ಯಾಂಟಿನ್ ಶೀಘ್ರದಲ್ಲಿ ತೆರೆಯಲಾಗುವುದು. ಮದ್ದೂರು ಕ್ಷೇತ್ರದ ಹಲವು ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವುದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೊಳ್ಳಲಾಗಿದೆ ಎಂದು ತಿಳಿಸಿದರು.
ಮದ್ದೂರು ಕ್ಷೇತ್ರದ ಜನತೆಯನ್ನು ಯಾವುದೇ ಸರ್ಕಾರಿ ಕಚೇರಿಯಲ್ಲಿ ಅಲೆಸಿದರೂ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗುಸುತ್ತೇನೆ. ಈ ಬಗ್ಗೆ ಜನರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ವಾರದಲ್ಲಿ ಎರಡು ದಿನ ಕಚೇರಿಯಲ್ಲಿ ದೊರೆಯಲಿದ್ದೇನೆ. ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್.ರಾಜೀವ್, ಮನ್ಮುಲ್ ಮಾಜಿ ಅಧ್ಯಕ್ಷ ಕಾರ್ಕಹಳ್ಳಿ ಬಸವೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಮಾಜಿ ಅಧ್ಯಕ್ಷ ಬಿ.ಎಂ.ನಂಜೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಕಪನಿಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಪಿ.ರವಿಚಂದ್ರ, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಪುಟ್ಟರಾಮು, ಕೆ.ವಿ.ಶ್ರೀನಿವಾಸ್, ಕದಳೂರು ತಿಮ್ಮೇಗೌಡ ಸೇರಿದಂತೆ ಹಲವು ಮುಖಮಡರು ಹಾಜರಿದ್ದರು.