

ಮೈಸೂರು: ‘ಪಟಾಕಿ ಬಳಸಬೇಡಿ’ ಎಂಬ ಜಾಗೃತಿಯ ಬೆಳಕಿನ ಜ್ಯೋತಿ ನಗರದ ಮನೆ- ಮನಗಳನ್ನು ಮುಟ್ಟಿದೆ. ಹೀಗಾಗಿ, ಪಟಾಕಿ ಹಚ್ಚುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಈ ಸಲ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬುದು ವ್ಯಾಪಾರಸ್ಥರ ಅಳಲು.
ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಕುರಿತು ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ವಲಯದಲ್ಲಿ ಅರಿವು ಹೆಚ್ಚಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ‘ಪಟಾಕಿ ಬಳಕೆ ಬಿಟ್ಟು, ಪರಿಸರ ಸಂರಕ್ಷಣೆ ಮಾಡಿ’ ಎಂದು ಶಿಕ್ಷಕರು ಜಾಗೃತಿ ಮೂಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಲು ಕೆಲ ಮಕ್ಕಳು ಕೂಡ ಉತ್ಸಾಹ ತೋರಲಿಲ್ಲ. ಅದರ ಬದಲಿಗೆ ದೀಪ ಬೆಳಗುತ್ತಿದ್ದಾರೆ.
ನಗರದ ಜೆಕೆ ಮೈದಾನ, ಇಟ್ಟಿಗೆಗೂಡು, ಸರಸ್ವತಿಪುರಂ, ಪಡುವಾರಹಳ್ಳಿ, ಚಾಮುಂಡಿಪುರಂ, ನಂಜುಮಳಿಗೆ, ರಾಮಕೃಷ್ಣನಗರ, ಕುವೆಂಪುನಗರ, ಅಕ್ಷಯಭಂಡಾರ ವೃತ್ತ, ಕುಂಬಾರಕೊಪ್ಪಲು ಸೇರಿದಂತೆ ನಗರದ ವಿವಿಧೆಡೆ ತೆರೆದಿರುವ ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ನಡೆಯಿತು.
ಈ ಅರಿವಿನ ಪರಿಣಾಮ ಎಲ್ಲೆಡೆಯೂ ಕಂಡು ಬರುತ್ತಿದ್ದು, ಮೈಸೂರಿನಲ್ಲೂ ಪಟಾಕಿಗಳ ಮಾರಾಟದ ಮೇಲೆಯೂ ಆಗಿದೆ. ಹಿಂದೆ ಪಟಾಕಿ ಅಂಗಡಿಗಳಿಗೆ ಜನರು ಮುಗಿಬೀಳುತ್ತಿದ್ದರು. ಆದರೆ, ಈಗ ಅಂತಹ ದೃಶ್ಯ ಕಡಿಮೆಯಾಗಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಎಲ್ಲೆಡೆ ಜಾಗೃತಿ ನಡೆಸುತ್ತಿರುವುದರಿಂದ ಜನತೆ ಪಟಾಕಿಗಳ ಮೇಲೆ ಒಲವು ಕಡಿಮೆಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಈ ಸಲ ಪಟಾಕಿ ಖರೀದಿಸಲು ಜನರು ನಿರಾಸಕ್ತಿ ತೋರುತ್ತಿದ್ದಾರೆ. ಪಟಾಕಿ ಮಾರಾಟ ಮಳಿಗೆಗಳತ್ತ ಕಳೆದ ಸೋಮವಾರ, ಮಂಗಳವಾರ, ಬುಧವಾರ ಗ್ರಾಹಕರು ಸುಳಿದೇ ಇರಲಿಲ್ಲ. ಗುರುವಾರ, ಶುಕ್ರವಾರ ಮಾತ್ರ ಕೊಂಚ ಗ್ರಾಹಕರ ದಟ್ಟಣೆ ಕಂಡು ಬಂತು.
ಸಾಮಾನ್ಯವಾಗಿ ದೀಪಾವಳಿಗೆ ಒಂದು ವಾರ ಇರುವಂತೆಯೇ ಪಟಾಕಿ ಮಾರಾಟ ಬಿರುಸಾಗಿರುತ್ತದೆ. ಈ ಸಲ ಮಳೆಯಿಲ್ಲದೇ, ಪಟಾಕಿ ಸಿಡಿಸಲು ಪೂರಕ ವಾತಾವರಣವಿದ್ದರೂ ಪಟಾಕಿ ಸದ್ದು ಅಡಗಿದೆ.
ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆಗಳನ್ನು ಮುಚ್ಚಿಸಿರುವ ಕಾರಣ ಈ ಬಾರಿ ಶೇ.30ರಷ್ಟು ಮಾತ್ರ ಪಟಾಕಿ ನಗರಕ್ಕೆ ಪೂರೈಕೆಯಾಗಿದೆ. ಜತೆಗೆ ಜಿಎಸ್‌ಟಿ ಪರಿಣಾಮದಿಂದ ಕಳೆದ ಬಾರಿಗಿಂತ ಈ ಬಾರಿ ಪಟಾಕಿ ಬೆಲೆಗಳು ಶೇ.40ರಷ್ಟು ಹೆಚ್ಚಾಗಿದೆ.
30 ವರ್ಷಗಳಿಂದ ಪಟಾಕಿ ವ್ಯಾಪಾರ ಮಾಡುತ್ತಿದ್ದು, ಕಳೆದ ಬಾರಿ ಮೂರು-ನಾಲ್ಕು ಲಕ್ಷ ರೂ. ವ್ಯಾಪಾರ ನಡೆಸಿದ್ದವು. ಈ ಸಲ ಶಿವಕಾಶಿಯಿಂದ ಬಂದಿರುವ ಪಟಾಕಿ ಕಡಿಮೆ ಇದೆ. 300 ರೂ.ನಿಂದ 3 ಸಾವಿರ ರೂ.ವರೆಗೂ ಪಟಾಕಿ ಬಾಕ್ಸ್‌ಗಳು ಬಂದಿವೆ. ಕಳೆದೆರಡು ದಿನದಿಂದ ಪಟಾಕಿ ವ್ಯಾಪಾರ ಕಡಿಮೆಯಾಗಿದೆ ಎಂದು ಪಟಾಕಿ ವ್ಯಾಪಾರಿ ಗೋವಿಂದರಾಜು ತಿಳಿಸಿದರು.
ಈ ಸಲ ಜನರು ಅದ್ದೂರಿಯಾಗಿ ಹಬ್ಬ ಮಾಡುತ್ತಿದ್ದಾರೆ. ನಮಗೂ ವ್ಯಾಪಾರ ಚೆನ್ನಾಗಿ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದವು. ಆದರೆ, ಕಳೆದೆರಡು ದಿನಗಳಿಂದ ವ್ಯಾಪಾರ ಡಲ್ ಆಗಿದೆ. ಬಹುತೇಕ ಕಡೆಗಳಲ್ಲಿ ಸೋಮವಾರದಿಂದಲೇ ಪಟಾಕಿ ವ್ಯಾಪಾರ ಆರಂಭವಾಗಿದ್ದು, ಖರೀದಿಗೆ ಬರುವ ಗ್ರಾಹಕರ ಸಂಖ್ಯೆ ವಾತ್ರ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಸರ ಮಾಲಿನ್ಯದ ದೃಷ್ಟಿಯಿಂದ ಹಸಿರು ಪಟಾಕಿಗಳು ತಂದಿರುವುದು ಸ್ವಾಗತಾರ್ಹ. ಇದರಿಂದ ನಮ್ಮ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಜಿಎಸ್‌ಟಿ ಪರಿಣಾಮ ವರ್ಷದಿಂದ ವರ್ಷಕ್ಕೆ ಪಟಾಕಿ ಬೆಲೆ ದುಬಾರಿಯಾಗುತ್ತಿದೆ. ಈ ಸಲ ಹೇಳುಕೊಳ್ಳುವ ರೀತಿಯಲ್ಲಿ ವ್ಯಾಪಾರ ನಡೆಯುತ್ತಿಲ್ಲ ಎಂದು ಮತ್ತೊಬ್ಬ ಪಟಾಕಿ ವ್ಯಾಪಾರಿ ಮೋಹನ್ ತಿಳಿಸಿದರು.
ಜಾಗೃತಿಯೊಂದಿಗೆ ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚಾಗಿರುವುದು ಈ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಣ್ಣ ಹೂ ಕುಂಡದ ಪೊಟ್ಟಣ ಕೊಳ್ಳಬೇಕಾದರೂ ಸುರುಸುರು ಬತ್ತಿ ಜತೆಗೆ ಕನಿಷ್ಠವೆಂದರೂ 250 ರೂ. ಕೊಡಬೇಕಾಗಿದೆ. ವಿವಿಧ ಪಟಾಕಿಗಳನ್ನು ಒಳಗೊಂಡ ಬಾಕ್ಸ್ ಬೆಲೆ ಶುರುವಾಗುವುದೇ 1,500 ರೂ. ಮೇಲ್ಪಟ್ಟು. ಆದ್ದರಿಂದ ಪಟಾಕಿ ಸುಡುವುದಕ್ಕಿಂತ, ಹಣತೆ ಹಚ್ಚುವುದು ಉತ್ತಮ ಎಂದು ಜನರು ಭಾವಿಸಿದ್ದಾರೆ ಎಂದು ವ್ಯಾಪಾರಿ ಸಂತೋಷ್ ಹೇಳಿದರು.
ಪಟಾಕಿಯನ್ನು ದಿನಕ್ಕೆ ಎರಡು ಗಂಟೆ ಮಾತ್ರ ಸಿಡಿಸಬೇಕೆಂಬ ಸರ್ಕಾರದ ಆದೇಶ ಜನರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಬೆಲೆ ಹೆಚ್ಚಳದಿಂದಲೇ ಪಟಾಕಿ ಕೊಳ್ಳಲು ಹಿಂದೇಟು ಹಾಕಿದರು.
ಪರಿಸರ ಮಾಲಿನ್ಯದ ದೃಷ್ಟಿಯಿಂದ ಹೆಚ್ಚು ಶಬ್ದವಾಗದ ಹಾಗೂ ಹೊಗೆ ರಹಿತವಾದ ಹೊಸ ಬಗೆಯ ಅನೇಕ ಪಟಾಕಿಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಬಿಯರ್ ಚಿಯರ್ ಮಾಡುವ ಮಾದರಿಯ ಪಟಾಕಿ ಮಾರುಕಟ್ಟೆಯಲ್ಲಿ ವಿಶೇಷವಾಗಿ ಕಂಡು ಬಂದಿದೆ. ಟಿನ್ ಬಿಯರ್ ಮಾದರಿಯ ಪಟಾಕಿಯು ಹಚ್ಚಿದ ನಂತರ ಹೂಕುಂಡದ ರೀತಿ ಉರಿದು ಚಿಯರ್ ಮಾಡಲಿದೆ.
ಆಕಾಶಬುಟ್ಟಿಗೆ ವಾರು ಹೋದ ಜನರು ಆಕಾಶದಲ್ಲಿ ದೀಪ ಬೆಳಗುತ್ತಾ ಸ್ವಚ್ಛಂದವಾಗಿ ಹಾರಾಡುವ ವೈವಿಧ್ಯಮಯ ಆಕಾಶಬುಟ್ಟಿಗಳು ಗ್ರಾಹಕರನ್ನು ಆಕರ್ಷಿಸಿದವು. ನಕ್ಷತ್ರ ವಾದರಿ, ಕಂದೀಲು ಆಕಾರದ ಆಕಾಶ ಬುಟ್ಟಿಗಳು, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿಗಳನ್ನು ಗ್ರಾಹಕರ ಖರೀದಿಸಿದರು. 100 ರಿಂದ 2000 ರೂ. ವರೆಗಿನ ಬೆಲೆಂು ಆಕಾಶ ಬುಟ್ಟಿಗಳು ಮಾರಾಟವಾದವು.