

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯ ಕೃತಿಗಳ ವಿಮರ್ಶೆ ಮಾಡುವವರು ಹಾಗೂ ವಿಮರ್ಶಾ ಲೇಖನಗಳನ್ನು ಓದುವವರ ಸಂಖ್ಯೆ ದಿನೇದಿನೇ ಕ್ಷೀಣಿಸುತ್ತಿದೆ ಎಂದು ವಿಮರ್ಶಕ ಹಾಗೂ ವಿಶ್ರಾಂತ ಪ್ರಾಂಶುಪಾಲ ಬಿ.ಮಹೇಶ್ ಹರವೆ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಲೇಖಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ದಿಲೀಪ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಂಪ ಕವಿಯ ಸಾಹಿತ್ಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉತ್ಕೃಷ್ಟ ಸ್ಥಾನವನ್ನು ಪಡೆದಿದ್ದು, ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳ ಮೂಲ ಪಠ್ಯವನ್ನು ಆಧರಿಸಿದ 13 ವಿಮರ್ಶಾ ಲೇಖನಗಳು ಪಚ್ಚೆಯ ಜಗುಲಿ ಕೃತಿಯಲ್ಲಿವೆ. ಹಳೆಗನ್ನಡ ಓದುವುದೆ ತ್ರಾಸದಾಯಕ. ಅದರ ಮೇಲೆ ವಿಮರ್ಶೆ ಮಾಡುವುದು ಇನ್ನೂ ಕಷ್ಟದ ಕೆಲಸ ಎಂದು ಹೇಳಿದರು.
ಪ್ರಸಿದ್ಧ ವಿಮರ್ಶಕರಾದ ಜಿ.ಎಚ್.ನಾಯಕ್, ವೆಂಕಟಾಚಲ ಶಾಸ್ತ್ರಿಗಳ ಮಾರ್ಗದರ್ಶನದಿಂದ ಅದನ್ನು ಆಗು ಮಾಡಿದ ಕೀರ್ತಿ ದಿಲೀಪ್ ಅವರಿಗೆ ಸಲ್ಲುತ್ತದೆ. ಲೇಖನಗಳು, ಬಳಸಿದ ಪದಗಳು,ಅರ್ಥೈಸಿಕೊಂಡು ಅನಾವರಣಗೊಳಿಸಿದ ರೀತಿ ಚೆನ್ನಾಗಿದೆ. ಆದರೆ ಯಾವುದೇ ವಿಮರ್ಶೆ ಅಸಮಗ್ರ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಪರಿಪೂರ್ಣತೆಗಾಗಿ ಇನ್ನಷ್ಟು ಸೇರ್ಪಡೆ ಅಗತ್ಯವಿದೆ. ಪರಿಷ್ಕೃತಗೊಳಿಸಿ ಪ್ರಕಟಿಸಿದರೆ ಇನ್ನಷ್ಟು ಮೌಲಿಕ ಕೃತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಸಾಹಿತಿ ಸ್ವಾಮಿ ಪೊನ್ನಾಚಿ ಮಾತನಾಡಿ, ಜಿಲ್ಲೆಯಲ್ಲಿ ಸತ್ವಯುತವಾಗಿ ಬರೆಯುವ ಹಲವು ಬರಹಗಾರರಿದ್ದು, ಮಾಹಿತಿ ಕೊರತೆಯಿಂದ ಅವರ ಕೃತಿಗಳು ಪ್ರಶಸ್ತಿಗಳಿಂದ ದೂರ ಉಳಿದಿವೆ. ರಾಜಕೀಯವಾಗಿ ಸಂಘರ್ಷ, ಭಿನ್ನತೆಗಳು ಸಹಜ. ಆದರೆ ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ಒಳ್ಳೆಯದಲ್ಲ. ಈ ಕಾರಣದಿಂದಾಗಿಯೇ ಹಲವು ಅವಕಾಶಗಳು ಜಿಲ್ಲೆಗೆ ಕೈತಪ್ಪಿವೆ. ಚಾಮರಾಜನಗರ ಲೇಖಕರು ಸಂಘವು ಎಲ್ಲರನ್ನು ಒಗ್ಗೂಡಿಸಿಕೊಂಡು ಜಿಲ್ಲೆಯ ಸಾಹಿತ್ಯ ಲೋಕವನ್ನು ವಿಸ್ತರಿಸಲಿ ಎಂದರು.
ಈ ವೇಳೆ ಪ್ರಶಸ್ತಿ ಪುರಸ್ಕೃತ ವಿಮರ್ಶಕ ಆರ್.ದಿಲೀಪ್ ಕುಮಾರ್ ಅವರನ್ನು ಲೇಖಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡಮಾದಯ್ಯ, ಸಾಹಿತ್ಯ ಮಿತ್ರಕೂಟ ಸಂಘಟನೆ ಅಧ್ಯಕ್ಷ ಬಾಳಗುಣಸೆ ಮಂಜುನಾಥ, ಸಾಹಿತಿ ಸೋಮಶೇಖರ್ ಬಿಸಲವಾಡಿ, ಡಾ.ಅಶ್ವಿನಿ ಕಸ್ಸಪ, ಎನ್.ಧನಲಕ್ಷ್ಮಿ, ಸಾಹಿತಿ ವೆಂಕಟರಾಜು, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಜನಶಕ್ತಿ ಸುರೇಶ್, ವಿಶ್ರಾಂತ ಪ್ರಾಂಶುಪಾಲ ಬಂಗಾರನಾಯಕ, ಕಲಾವಿದ ರವಿಕುಮಾರ್ ಕೊಮಾರನಪುರ, ಸಿದ್ದಲಿಂಗಸ್ವಾಮಿ, ಡಾ.ಪ್ರೇಮ ಹಾಜರಿದ್ದರು.