

ಚಿತ್ರದುರ್ಗ: ನಗರದ ಭೀಮಸಮುದ್ರ ಮಾರ್ಗದ ಧವಳಗಿರಿ ಬಡಾವಣೆಯ 2ನೇ ಹಂತದಲ್ಲಿರುವ ಶ್ರೀ ಕ್ಷಿಪ್ರ ಪ್ರಸಾದ ಮಹಾಗಣಪತಿ ಸನ್ನಿಧಾನದ 11ನೇ ವಾರ್ಷಿಕೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. ಇದರ ಅಂಗವಾಗಿ ಜೂ. 9 ಮತ್ತು 10ರಂದು ಎರಡೂ ದಿನ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ.
ಇಲ್ಲಿನ ದೇಗುಲದ ಗಣಪತಿಯೂ ಭಕ್ತರ ಭಕ್ತಿಗೆ ಬಹುಬೇಗ ಒಲಿದು, ಇಷ್ಟಾರ್ಥ ಈಡೇರಿಸುವ ಕಾರಣ ಕ್ಷಿಪ್ರ ಪ್ರಸಾದ ಮಹಾಗಣಪತಿ ಎಂಬುದಾಗಿ ಖ್ಯಾತಿ ಪಡೆದಿದೆ.
9ರಂದು ಬೆಳಗ್ಗೆ 8ರಿಂದ ಸ್ವಸ್ತಿ ಪುಣ್ಯಾಹ ವಾಚನ, ಆಚಾರ್ಯದಿ ಋತ್ವಿಗ್ವರಣ, ಪಂಚಗವ್ಯ ಹವನ, ಕ್ಷಿಪ್ರ ಪ್ರಸಾದ ಮಹಾಗಣಪತಿಗೆ ಮಹಾನ್ಯಾಸ ಪೂರ್ವಕ ಲಘು ರುದ್ರಾಭಿಷೇಕ, ಮಹಾಭಿಷೇಕ, ಇನ್ನಿತರೆ ಪೂಜೆ ನಂತರ ಮಹಾಮಂಗಳಾರತಿ ಜರುಗಲಿದೆ. ಇದೇ ವೇಳೆ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ.
ಸಂಜೆ 6.30ರಿಂದ ರಾಕ್ಷೋಘ್ನ ಹೋಮ ನಡೆಯಲಿದೆ. ಸಂಜೆ 7ಕ್ಕೆ ಗಂಜಿಗಟ್ಟೆ ಆರ್.ಕೃಷ್ಣಮೂರ್ತಿ ಮತ್ತು ಸಂಗಡಿಗರಿಂದ ಜಾನಪದ, ಭಕ್ತಿಗೀತೆ, ಲಾವಣಿ ಹಾಗೂ ಶರಣರ ವಿಚಾರಧಾರೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಂತರ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆಯಾಗಲಿದೆ.
10ರಂದು ಬೆಳಗ್ಗೆ 8ರಿಂದ ಮಹಾಗಣಪತಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ ಹಾಗೂ ನವಗ್ರಹ ಪುರಸ್ಸರ ಅಷ್ಟದ್ರವ್ಯ ಮಹಾಗಣಪತಿ ಹೋಮದ ಪೂರ್ಣಾಹುತಿ, ಅಲಂಕಾರ ಸೇವೆ, ಮಧ್ಯಾಹ್ನ 12.30ಕ್ಕೆ ಅಷ್ಟಾವಧಾನ ಮಹಾಮಂಗಳಾರತಿ, ಮಧ್ಯಾಹ್ನ 1ರ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಧವಳಗಿರಿ ಬಡಾವಣೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಮೊಬೈಲ್ 9880466192, 9449145416ಗೆ ಸಂಪರ್ಕಿಸಬಹುದು ಎಂದು ದೇಗುಲ ಅಭಿವೃದ್ಧಿ ಸಮಿತಿ ತಿಳಿಸಿದೆ.