

ಚಾಮರಾಜನಗರ: ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಮಲೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷ್ಮೀ ತಿಳಿಸಿದರು.
ತಾಲೂಕಿನ ಮಲೆಯೂರು ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಲಸೀಕಾಕರಣ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕ್ಷಯರೋಗ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 6 ದುರ್ಬಲ ವರ್ಗಗಳಾದ ಐದು ವರ್ಷ ಒಳಪಟ್ಟ ಕ್ಷಯ ರೋಗಿಗಳು, ಕ್ಷಯ ರೋಗಿಗಳ ಸಂಪರ್ಕಿತರು, ಅತೀ ಕಡಿಮೆ ತೂಕದ ವ್ಯಕ್ತಿಗಳು, 60 ವರ್ಷ ಮೇಲ್ಪಟ್ಟವರು ಮಧುಮೇಹಿಗಳು ಹಾಗೂ ಧೂಮಪಾನಿಗಳನ್ನು ಗುರುತಿಸಲಾಗುತ್ತಿದೆ. ಅಂತಹ ವ್ಯಕ್ತಿಗಳಿಗೆ ಕ್ಷಯ ರೋಗವನ್ನು ತಡೆಗಟ್ಟುವಂತಹ ವಯಸ್ಕ ಬಿ.ಸಿ.ಜಿ ಲಸಿಕೆಯನ್ನು ನೀಡಲಾಗುತ್ತಿದೆ. ಅಂತವರು ಲಸಿಕೆಯನ್ನು ಪಡೆದುಕೊಂಡು ಕ್ಷಯರೋಗ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆಯೊಂದಿಗೆ ಸಹಕಾರಿ ನೀಡಬೇಕಿದೆ ಎಂದರು.
ಈ ವೇಳೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿಯ ಶೇಖರ್, ಸ್ವಾಮಿ, ಚೇತನ್, ಹರವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಸುರೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನವೀನ್, ಸಮುದಾಯ ಆರೋಗ್ಯ ಅಧಿಕಾರಿ ಸುರೇಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಆಶಾ, ಉಮಾ ಮಹೇಶ್ವರಿ ಹಾಗೂ ಇತರರು ಹಾಜರಿದ್ದರು.