

ಪರಶುರಾಮಪುರ: ಕ್ಷಯಕ್ಕೆ ಒಳಗಾದವರು ಇಂದಿನ ಆಧುನಿಕ ಕಾಲಘಟ್ಟದಲ್ಲೂ ತಿಳಿವಳಿಕೆ ಕೊರತೆ ಹಿನ್ನೆಲೆ ಚಿಕಿತ್ಸೆ ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ಸುಧಾ ಬೇಸರ ವ್ಯಕ್ತಪಡಿಸಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಚಿತ್ರದುರ್ಗ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಕ್ಷಯ ರೋಗ ವಿಭಾಗದ ವತಿಯಿಂದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಆರೋಗ್ಯ ಕಾರ್ಯಕರ್ತರೊಡನೆ ಸಮಾಲೋಚಿಸಿ ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಜನವಸತಿ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಕ್ಷಯದ ಲಕ್ಷಣ ಕಂಡು ಬರುವವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೂಕ್ತ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಮೊದಲೆಲ್ಲಾ ಕ್ಷಯ ರೋಗವೆಂದರೆ ಭಯಭೀತರಾಗುತ್ತಿದ್ದರು. ಈಗ ಆಧುನಿಕ ವೈದ್ಯಕೀಯ ಔಷಧಿಗಳು ಲಭ್ಯವಿದ್ದು, ಕ್ಷಯ ರೋಗಿಯು ನಿಯಮಿತವಾಗಿ ಮಾತ್ರೆ ತೆಗೆದುಕೊಂಡು ಪೌಷ್ಟಿಕ ಆಹಾರ ಸೇವಿಸಿದರೆ ರೋಗದಿಂದ ಗುಣಮುಖರಾಗಬಹುದು ಎಂದರು.
ಇದೇ ವೇಳೆ ಹೋಬಳಿ ವ್ಯಾಪ್ತಿಯ ವಿವಿಧ ಪಿಎಚ್‌ಸಿಗಳ ವ್ಯಾಪ್ತಿಯಲ್ಲಿ ಕ್ಷಯ ರೋಗಿಗಳ ಆರೋಗ್ಯ ಸ್ಥಿತಿಗತಿ ಮತ್ತು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಕಾರ್ಯಕರ್ತರು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ರವಿ, ಲ್ಯಾಬ್‌ಟೆಕ್ನೀಷಿಯನ್ ದಯಾನಂದ, ಆರೋಗ್ಯ ಕಾರ್ಯಕರ್ತ ಲೇಪಾಕ್ಷಿ, ವಿರೂಪಾಕ್ಷಿ, ಅನಿತಾ, ಮೋಹಿನಿ, ಭರತ್, ಆಸ್ಪತ್ರೆ ಸಿಬ್ಬಂದಿ, ಗ್ರಾಮಸ್ಥರು ಇದ್ದರು.