ಕ್ಷಯ ರೋಗಕ್ಕೆ ಜಾಗೃತಿಯೇ ಮದ್ದು

TMK_PAGE_2 Lead
ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಕ್ಷಯ ರೋಗ ದಿನದ ಅಂಗವಾಗಿ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಚಾಲನೆ ನೀಡಿದರು. ಐಎಂಎ ಅಧ್ಯಕ್ಷ ಡಾ. ಚಂದ್ರಶೇಖರ್, ಡಾ.ಸನತ್ ಕುಮಾರ್, ಡಾ.ರೇಖಾ, ಎಂ.ಗೋಪಿ ಮತ್ತಿತತರರು ಇದ್ದರು.
Published on

ತುಮಕೂರು: ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಡಿ ಇಡೀ ರಾಜ್ಯದಲ್ಲೇ ತುಮಕೂರು ಜಿಲ್ಲೆ 2ನೇ ಸ್ಥಾನ ಪಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಹೇಳಿದರು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಶುಕ್ರವಾರ ಕ್ಷಯರೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವುದರಿಂದಲೇ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು ಎಂದರು.
1882ರ ಮಾರ್ಚ್ 24ರಂದು ವಿಜ್ಞಾನಿ ರಾಬರ್ಟ್ ಕಾಕ್ ಎಂಬುವರು ಕ್ಷಯ ರೋಗ ಪತ್ತೆಹಚ್ಚಿದ್ದು, ಅಂದಿನಿಂದಲೂ ಜಗತ್ತಿನಾದ್ಯಂತ ಕ್ಷಯ ರೋಗ ದಿನವನ್ನು ಪ್ರತಿ ವರ್ಷವೂ ಒಂದೊಂದು ಘೋಷವಾಕ್ಯದಡಿ ಆಚರಿಸಲಾಗುತ್ತಿದೆ. ಈ ಬಾರಿಯ ಘೋಷವಾಕ್ಯ ‘ಕ್ಷಯ ರೋಗವನ್ನು ಕೊನೆಗಾಣಿಸಬಹುದು’ ಎಂಬುದಾಗಿದೆ ಎಂದು ತಿಳಿಸಿದರು.
ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ರೋಗ ಹರಡುವುದನ್ನು ತಡೆಗಟ್ಟಬಹುದು. ಇದು ಕೇವಲ ಶ್ವಾಸಕೋಶ ಮಾತ್ರವಲ್ಲ, ಕಣ್ಣು, ಕಿವಿ ಸೇರಿ ದೇಹದ ಎಲ್ಲ ಭಾಗಗಳಿಗೂ ಹರಡುತ್ತದೆ. ಹಾಗಾಗಿ, ಸರಿಯಾದ ಚಿಕಿತ್ಸೆ ನೀಡುವುದರಿಂದ ಈ ರೋಗವನ್ನು ಗುಣಪಡಿಸಬಹುದು. ಕ್ಷಯ ರೋಗದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದ್ದು ಮಧುಮೇಹದಿಂದ ಬಳಲುತ್ತಿದ್ದವರಲ್ಲಿ ಕ್ಷಯ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಚಿಕಿತ್ಸೆ ಉಚಿತ: ಕ್ಷಯ ರೋಗಿಗಳಿಗೆ ಚಿಕಿತ್ಸೆ ಹಾಗೂ ಪರೀಕ್ಷೆ ಸಂಪೂರ್ಣ ಉಚಿತವಾಗಿರುತ್ತದೆ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಬಹುಬೇಗ ಗುಣಮುಖರಾಗಬಹುದು. ದೀರ್ಘಾವಧಿ, ಕೆಮ್ಮು, ಕಡಿಮೆ ತೂಕ ಇದ್ದರೆ ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.ಕೆಮ್ಮಿದಾಗ, ಸೀನಿದಾಗ ಕರವಸ್ತ್ರ ಬಳಸಬೇಕು. ಆ ಮೂಲಕ ರೋಗ ಹಡುವುದನ್ನು ತಪ್ಪಿಸಬಹುದು ಎಂದು ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಸಲಹೆ ನೀಡಿದರು.


ನಗರದಲ್ಲಿ ಜಾಗೃತಿ ಜಾಥಾ: ನಗರದ ಟೌನ್‌ಹಾಲ್ ವೃತ್ತದಿಂದ ಆರಂಭವಾದ ಕ್ಷಯ ರೋಗದ ಅರಿವು ಮೂಡಿಸುವ ಜನಜಾಗೃತಿ ಜಾಥಾವು ಅಶೋಕ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ತಲುಪಿತು. ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪ್ಲೇಕಾರ್ಡ್ ಹಿಡಿದು ಅರಿವು ಮೂಡಿಸಿದರು. ಜಾಥಾದಲ್ಲಿ ಐಎಂಎ ಅಧ್ಯಕ್ಷ ಡಾ.ಚಂದ್ರಶೇಖರ್, ಡಾ. ರೇಖಾ, ಆರೋಗ್ಯ ಸಮಿತಿ ಸದಸ್ಯ ಎಂ. ಗೋಪಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net