ಕ್ಷಯ ರೋಗ ಮುಕ್ತಕ್ಕೆ ಕಸರತ್ತು: ಜಿಲ್ಲಾ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ

23CBP1(hospital)
Published on

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ

ಪರಿಣಾಮಕಾರಿ ಚಿಕಿತ್ಸೆ ಮತ್ತು ನಿರಂತರ ಜಾಗೃತಿ ಕಾರ್ಯಕ್ರಮಗಳ ಮೂಲಕ ಚಿಕ್ಕಬಳ್ಳಾಪುರವನ್ನು ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆ ಕಸರತ್ತು ನಡೆಸುತ್ತಿದೆ.ಜಿಲ್ಲೆಯಲ್ಲಿ ಕಳೆದ 2017ನೇ ಸಾಲಿನಿಂದ 2021ರ ಅಂತ್ಯದವರೆಗೆ 8,683 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿದ್ದು, ಈ ಪೈಕಿ 7,997 ರೋಗಿಗಳಿಗೆ ಉತ್ತಮ ಚಿಕಿತ್ಸೆಗೆ ಕಾಯಿಲೆ ವಾಸಿಯಾಗಿದೆ. 616 ರೋಗಿಗಳು ಮರಣ ಹೊಂದಿದ್ದಾರೆ.

ಇನ್ನೂ 2017ರಿಂದಲೂ ಇಲ್ಲಿಯವರೆಗೂ ಕ್ಷಯ ರೋಗಿಗಳ ವಾಸಿ ಸಂಖ್ಯೆಯು ಏರಿಕೆ ಯಾಗಿದೆ. 2025ರೊಳಗೆ ಕ್ಷಯರೋಗಿಗಳ ಸಾವು ನೋವುಗಳನ್ನು ಶೇ.90ರ ಪ್ರಮಾಣಕ್ಕೆ ಇಳಿಸುವ ಮಧ್ಯಂತರ ಗುರಿ ಹೊಂದಲಾಗಿದೆ. 2018ನೇ ಸಾಲಿನ ಜನವರಿಯಿಂದ ಕ್ಷಯರೋಗಿಗಳಿಗೆ ದಿನನಿತ್ಯ ಮಾತ್ರೆಗಳನ್ನು ನುಂಗಿಸುವ ಹೊಸ ಪದ್ಧತಿ ಕಾರ್ಯ ರೂಪಕ್ಕೆ ಬಂದಿದೆ.

ನೇರ ನಿಗಾವಣೆ ಚಿಕಿತ್ಸೆ ಪರಿಷ್ಕೃತ ಕಾರ್ಯಕ್ರಮದಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗದ ಸ್ಥಿತಿಗತಿಯನ್ನಾಧಾರಿಸಿ 6ರಿಂದ 9 ತಿಂಗಳು ಔಷಧೋಪಚಾರ ನೀಡಲಾಗುತ್ತದೆ. ಇದಕ್ಕೆ ಜಿಲ್ಲೆಯಲ್ಲಿ 1526 ನೇರ ನಿಗಾವಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕ್ಷಯರೋಗಿಗಳೊಂದಿಗಿನ ಕುಟುಂಬದ ಸದಸ್ಯರಿಗೂ ಭವಿಷ್ಯದಲ್ಲಿ ಕಾಯಿಲೆ ಬಾರದಿರಲು ಐಜಿಆರ್‌ಎ ರಕ್ತ ಪರೀಕ್ಷೆ ಬಳಿಕ ಸೋಂಕು ತಡೆಗಟ್ಟುವ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 614 ಪರೀಕ್ಷೆ ಪ್ರಕರಣಗಳಲ್ಲಿ 156 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ಸೌಲಭ್ಯವುಳ್ಳ ಒಂದು ಪ್ರತ್ಯೇಕ ವಾಡ್‌ರ್ ಮೀಸಲಿರಿಸಿದ್ದು, ಇಲ್ಲಿನ ಸಿಬಿನಾಟ್ ಪ್ರಯೋಗಾಲಯದಲ್ಲಿ ಕಫ ಪರೀಕ್ಷೆ ಮಾಡಿಸಿದ 2 ಗಂಟೆಯೊಳಗೆ ವರದಿ ಪಡೆಯಬಹುದಾಗಿದೆ.ಇನ್ನೂ ನಿಕ್ಷಯ್ ಪೋಷಣೆ ಯೋಜನೆಯಡಿ ಪೌಷ್ಟಿಕ ಆಹಾರಕ್ಕಾಗಿ ರೋಗಿಗಳ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಪ್ರತಿ ತಿಂಗಳು 500 ರೂ. ಜಮಾ ಮಾಡಲಾಗುತ್ತಿದೆ.

14 ಗ್ರಾಪಂಗಳಲ್ಲಿ ಅಭಿಯಾನ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 20 ಗ್ರಾಪಂಗಳಲ್ಲಿ ವಿದ್ಯಾರ್ಥಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರನ್ನೊಳಗೊಂಡಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಾಗೇಪಲ್ಲಿಯ ಪರಗೋಡು ಮತ್ತು ದೇವರಗುಡಿಪಲ್ಲಿ, ಚಿಕ್ಕಬಳ್ಳಾಪುರದ ಮಂಚನಬಲೆ ಮತ್ತು ಅಗಲಗುರ್ಕಿ, ಚಿಂತಾಮಣಿಯ ಕೋನಪಲ್ಲಿ ಮತ್ತು ಕಾಗತಿ, ಗವರಿಬಿದನೂರಿನ ಕಾದಲವೇಣಿ ಮತ್ತು ಹುದಗೂರು, ಗುಡಿಬಂಡೆಯ ಬೀಚಗಾನಹಳ್ಳಿ ಮತ್ತು ತಿರುಮಣಿ, ಮಂಚೇನಹಳ್ಳಿಯ ಪುರ ಮತ್ತು ಮಂಚೇನಹಳ್ಳಿ, ಶಿಡ್ಲಘಟ್ಟದ ದೊಡ್ಡತೇಕಹಳ್ಳಿ ಮತ್ತು ತಿರುಮಣಿ ಗ್ರಾಪಂ ಸೇರಿದಂತೆ ಪ್ರತಿ ತಾಲೂಕಿಗೆ ತಲಾ 2ರಂತೆ 14 ಗ್ರಾಪಂಗಳನ್ನು ಕ್ಷಯ ಮುಕ್ತಗೊಳಿಸಲು ಶ್ರಮಿಸಲಾಗುತ್ತಿದೆ.

24ರಂದು ಜಾಗೃತಿ ಜಾಥಾ: ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಮಾ.24ರಂದು ಬೆಳಗ್ಗೆ 10ಕ್ಕೆ ಕ್ಷಯ ರೋಗದ ಕುರಿತ ಜಾಥಾ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆಯಲಿರುವ ಜಾಥಾಗೆ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ ನೀಡಲಿದ್ದಾರೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕ್ಷಯ ರೋಗ ನಿರ್ಮೂಲನೆಗೆ ತೊಡಗಿಸಿ ಜೀವ ಉಳಿಸಿ ಘೋಷಣೆಯೊಂದಿಗೆ ಕ್ಷಯ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜನ ಜಾಗೃತಿಗಾಗಿ ಹಲವೆಡೆ ಸ್ಟಾಲ್‌ಗಳನ್ನು ಸ್ಥಾಪನೆ, ಜಾಥಾ ನಡೆಸಲಾಗುತ್ತಿದೆ. ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net