

ಹುಲಸೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ. ಒಂದು ವೇಳೆ ಯತ್ನಾಳ್ ಗೆದ್ದರೆ ಮಠ ತೊರೆಯುವೆ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಅಲ್ಲಮಪ್ರಭು ದೇವರ ಶೂನ್ಯ ಪೀಠ ಅನುಭವ ಮಂಟಪ ಪರಿಸರದಲ್ಲಿ ತಮ್ಮ ಜನ್ಮದಿನ ನಿಮಿತ್ತ ಭಾನುವಾರ ರಾತ್ರಿ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಬಸವಣ್ಣನವರಿಗೆ ಅಪಮಾನವಾಗುವಂತೆ ಮಾತನಾಡಿರುವ ಯತ್ನಾಳ್ ನಾನೇ ಬಸವಣ್ಣ ಎಂದು ಹೇಳಿಕೊಳ್ಳುತ್ತಿದ್ದಾರೆ. ೧೨ನೇ ಶತಮಾನದ ವಿಶ್ವಗುರು ಮಾತ್ರ ಬಸವಣ್ಣ. ಕೇವಲ ಹೆಸರು ಇಟ್ಟುಕೊಂಡರೆ ಅವರೊಂದಿಗೆ ಹೋಲಿಸಲು ಆಗದು ಎಂದು ಗುಡುಗಿದರು.
ಸಚಿವ-ಶಾಸಕರು, ಚುನಾಯಿತ ಪ್ರತಿನಿಧಿಗಳು ಇಲ್ಲಸಲ್ಲದ ಮಾತುಗಳನ್ನಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು. ಯತ್ನಾಳ್ ಅವರಿಗೆ ನಾಚಿಕೆ, ಮರ್ಯಾದೆ ಇದ್ದರೆ ಲಿಂಗಾಯಿತರ ಕ್ಷಮೆಯಾಚಿಸಬೇಕು. ಇಲ್ಲವಾದರೆ ಎಲ್ಲ ಮಠಾಧೀಶರು ಮತ್ತು ಲಿಂಗಾಯತರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುಣತೀರ್ಥವಾಡಿಯ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಮಕ್ಕಳು ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಪಾಲಕರು ಮಕ್ಕಳಿಗೆ ಮೊಬೈಲ್ ನೀಡದೆ ವಚನ ಪುಸ್ತಕ ಕೊಟ್ಟು ಸನ್ಮಾರ್ಗದತ್ತ ನಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ಶ್ರೀ ಪ್ರಭುದೇವ ಸ್ವಾಮೀಜಿ, ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಶಾಸಕ ಶರಣು ಸಲಗರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಶಿವಶರಣಪ್ಪ ಮಿಠಾರೆ, ಸುಧೀರ ಕಾಡಾದಿ, ರಾಜಕುಮಾರ ನಿಡೋದೆ ಇತರರಿದ್ದರು.
ಬೇಲೂರು ಉರಿಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಹೆಡಗಾಪುರದ ಶ್ರೀ ಶಿವಲಿಂಗ ಸ್ವಾಮೀಜಿ, ಬೆಂಗಳೂರಿನ ಶ್ರೀ ಚನ್ನಬಸವಾನಂದ ಸ್ವಾಮೀಜಿ, ಗುಣತೀರ್ಥವಾಡಿ ಶ್ರೀ ಬಸವಕುಮಾರ ಸ್ವಾಮೀಜಿ, ಉದಗೀರದ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರಿಗೆ ಸಮಾಜ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗುರುನಾಥ ಮೂಲಗೆ, ಶ್ರೀನಿವಾಸ, ಸಂತೋಷ ರೆಡ್ಡಿ ಸೇರಿ ವಿವಿಧ ಕ್ಷೇತ್ರದ ಸಾಧಕರನ್ನೂ ಸನ್ಮಾನಿಸಲಾಯಿತು.
ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ಸ್ವಾಗತಿಸಿ ನಿರೂಪಣೆ ಮಾಡಿದರು. ಗುರು ಬಸವೇಶ್ವರ, ಶ್ರೀ ವೀರಭದ್ರೇಶ್ವರ, ವಿದ್ಯಾ ಜ್ಯೋತಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳ ಭರತನಾಟ್ಯ ಹಾಗೂ ಕೋಲಾಟ ನೋಡುಗರ ಗಮನ ಸೆಳೆಯಿತು.
ವಿಶ್ವಗುರು ಬಸವಣ್ಣನವರು ಸಮಾನತೆಗಾಗಿ ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಶರಣರು ಬರೆದ ವಚನಗಳಲ್ಲಿ ಅದ್ಭುತ ಶಕ್ತಿ ಅಡಗಿದೆ. ನಮ್ಮ ಜೀವನ ಸುಧಾರಣೆಗೆ ವಚನದ ಒಂದು ಸಾಲು ಸಾಕು. ಪ್ರತಿದಿನ ತಪ್ಪದೆ ವಚನಗಳನ್ನು ಓದಿ ಅನುಕರಣೆ ಮಾಡಿದರೆ ಜೀವನ ಸಾರ್ಥಕ್ಯವಾಗಲಿದೆ.
| ಡಾ.ಶೈಲೇಂದ್ರ ಬೆಲ್ದಾಳೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ