ಕ್ಷಮಿಸಿ ಸಿಸಿ ಕ್ಯಾಮರಾ ದುರಸ್ತಿಯಲ್ಲಿವೆ! ನೆಲಮಂಗಲದಲ್ಲಿ ಕುರುಡಾಗಿವೆ ಹದ್ದಿನ ಕಣ್ಣು

07 Nela Ph 02 Udgatane
Published on

ಸುಗ್ಗರಾಜು ಜಿ.ಕೆ.ನೆಲಮಂಗಲ
ಜಟಿಲವಾಗಿದ್ದ ಅನೇಕ ಅಪರಾಧ ಪ್ರಕರಣಗಳನ್ನು ಬಯಲಿಗೆಳೆಯಲು ಸಿಸಿ ಕ್ಯಾಮರಾಗಳು ಅನೇಕ ಬಾರಿ ಅನುಕೂಲ ಕಲ್ಪಿಸಿವೆ. ಹೀಗಾಗಿ ಅವುಗಳಿಗೆ ಹದ್ದಿನ ಕಣ್ಣು ಎಂಬ ಪರ್ಯಾಯ ಹೆಸರು ಬಂದಿದೆ. ಆದರೆ ನೆಲಮಂಗಲ ನಗರ ವ್ಯಾಪ್ತಿಯ ಹದ್ದಿನ ಕಣ್ಣುಗಳು ಕುರುಡಾಗಿ ವರ್ಷ ಕಳೆದರೂ ಚಿಕಿತ್ಸೆ ಭಾಗ್ಯ ದೊರೆತಿಲ್ಲ.
ಹೌದು, ನಗರಸಭೆ ವ್ಯಾಪ್ತಿಯಲ್ಲಿ ಮಹಿಳೆಯರು, ಮಕ್ಕಳ ಸುರಕ್ಷತೆ ಸೇರಿ ಅಪರಾಧ ಪ್ರಕರಣ ಪತ್ತೆ, ನಿಯಂತ್ರಣಕ್ಕಾಗಿ ಸಿಸಿ ಕ್ಯಾಮರಾ ಅಳವಡಿಸಿ ಕೊಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತ್ತು. ಅದರಂತೆ ನಗರ ಠಾಣೆಯಲ್ಲಿ 59 ಲಕ್ಷ ರೂ. ವೆಚ್ಚದಲ್ಲಿ 2021ರ ಡಿಸೆಂಬರ್‌ನಲ್ಲಿ ನಗರಸಭೆಯು ಕಿಯೋನಿಕ್ಸ್ ಮೂಲಕ ಸಿಸಿ ಕ್ಯಾಮರಾ ಅಳವಡಿಸಿತ್ತು. ಆದರೆ ಅವುಗಳು ಆರಂಭಗೊಂಡ ತಿಂಗಳಲ್ಲಿಯೇ ಕೆಟ್ಟಿವೆ
ಎಂಬ ಆರೋಪ ಕೇಳಿಬಂದಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ಅಳವಡಿಸಿದ್ದ ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದು ಅಪರಾಧ ಪ್ರಕರಣಗಳ ಪತ್ತೆಗೆ ಪೊಲೀಸರಿಗೆ ತೊಡಕಾಗಿದೆ.
ನಗರ ಠಾಣೆ ಬಳಿ, ಸಾರ್ವಜನಿಕ ಬಸ್ ನಿಲ್ದಾಣ, ದುರ್ಗಾ ಸಾಗರ್ ಹೊಟೇಲ್ ಸರ್ಕಲ್, ಟಿಬಿ ಸ್ಟಾಪ್, ಚೆನ್ನಪ್ಪ ಬಡಾವಣೆ, ಅರಿಶಿಣಕುಂಟೆ, ಸೊಂಡೆಕೊಪ್ಪ ವೃತ್ತ, ಕುಣಿಗಲ್ ವೃತ್ತ, ಪೇಟೆಬೀದಿ ಸೇರಿ ವಿವಿಧ ಸ್ಥಳಗಳಲ್ಲಿ ಒಟ್ಟು 40 ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಪ್ರಸ್ತುತ 1 ಕ್ಯಾಮರಾ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದೆಲ್ಲವೂ ಆ್ ಆಗಿವೆ. ಇದರಿಂದ ಅಪರಾಧ ಕೃತ್ಯಗಳು ನಡೆದಾಗ ಜನರು ಠಾಣೆಗೆ ಬಂದು ಸರ್ ಸಿಸಿ ಕ್ಯಾಮರಾದಲ್ಲಿ ಚೆಕ್ ಮಾಡಿ ಎಂದರೆ ಪೊಲೀಸರು ದಯವಿಟ್ಟು ಕ್ಷಮಿಸಿ ಕ್ಯಾಮರಾಗಳು ದುರಸ್ತಿಯಲ್ಲಿವೆ ಎಂಬ ಉತ್ತರ ನೀಡುತ್ತಿದ್ದಾರೆ.
ನಿರ್ವಹಣೆಯಾಗದ ಸಿಸಿಟಿಸಿ ಕ್ಯಾಮರಾಗಳು : ನಗರಸಭೆಯು 59 ಲಕ್ಷ ರೂ. ಅನುದಾನವನ್ನು 3 ವಿಧದ ಸಿಸಿ ಕ್ಯಾಮರಾ, ಇನ್ನಿತರ ಉಪಕರಣಗಳ ಖರೀದಿ ಮತ್ತು ಅಳವಡಿಕೆಗೆ ನೀಡಿದೆ. ಅದರ ನಿರ್ವಹಣೆಗೆ ಅನುದಾನ ಮೀಸಲಿಟ್ಟಿಲ್ಲ. ಇದರಿಂದ ಕೆಟ್ಟ ಸಿಸಿ ಕ್ಯಾಮರಾಗಳ ದುರಸ್ತಿಗೆ ಅನುದಾನವಿಲ್ಲದೆ ಅವುಗಳು ಪ್ರಯೋಜನಕ್ಕಿಲ್ಲದಂತಾಗಿದೆ.

ಪೊಲೀಸರ ಮನವಿಗೆ ಸ್ಪಂದಿಸಿಲ್ಲ : ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಕೆ ಮಾಡಿರುವ ಕ್ಯಾಮರಾಗಳನ್ನು ದುರಸ್ತಿ, ನಿರ್ವಹಣೆಗೆ ಗುತ್ತಿಗೆದಾರರನ್ನು ನಿಯೋಜಿಸುವಂತೆ ನಗರಸಭೆ ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಹಲವು ಬಾರಿ ಮನವಿ ಮಾಡಿದೆಯಾದರೂ ಪ್ರಯೋಜನವಾಗಿಲ್ಲ.

ಪ್ರಕರಣ ಭೇದಿಸಲು ತೊಡಕು : ನಗರ ಠಾಣೆಯ ಕಂಟ್ರೋಲ್ ರೂಂನಲ್ಲಿ ಕುಳಿತು ನಗರಸಭೆ ವ್ಯಾಪ್ತಿಯ ನಿಗಾವಣೆ ಜತೆಗೆ ಪೊಲೀಸರ ಕಣ್ಣುತಪ್ಪಿಸಿ ಮನೆ, ವಾಣಿಜ್ಯ ಮಳಿಗೆಗಳಲ್ಲಿ ಕಳವು, ಸರಗಳ್ಳತನ, ದರೋಡೆ, ಕೊಲೆಯಂತಹ ಅಪರಾಧ ಪ್ರಕರಣಗಳ ಆರೋಪಿಗಳು ಅವರ ವಾಹನ, ಪಲಾಯನವಾದ ಮಾರ್ಗದ ಸುಳಿವು ನೀಡುತ್ತಿದ್ದ ಕ್ಯಾಮರಾಗಳು ಕೈಕೊಟ್ಟಿರುವುದು ಅಪರಾಧ ಪ್ರಕರಣಗಳ ತ್ವರಿತ ಪತ್ತೆಗೆ ಸವಾಲಾಗಿದೆ.

ಮುಂದಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಿಸಿ ಕ್ಯಾಮರಾಗಳ ದುರಸ್ತಿ, ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದರ ಚರ್ಚಿಸಿ ಶೀಘ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡುತ್ತೇವೆ.
ಲತಾಹೇಮಂತಕುಮಾರ್ ನಗರಸಭೆ ಅಧ್ಯಕ್ಷೆ

ನಗರಸಭೆ ಆಡಳಿತ ಮಂಡಳಿ ರಚನೆಗೂ ಮುನ್ನ ಸಿಸಿ ಕ್ಯಾಮರಾ ಅಳವಡಿಕೆ ವಿಚಾರದಲ್ಲಿ ಅಂದಿನ ಪೌರಾಯುಕ್ತರು ಮತ್ತು ಕೆಲ ಅಧಿಕಾರಿಗಳು ಸೇರಿ ಮಾಡಿರುವ ಅವ್ಯವಹಾರ, ಉದ್ದೇಶಿತ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಕೆ ಮಾಡದಿರುವುದು, ನಿಯಮಾನುಸಾರ ವಾರ್ಷಿಕ ನಿರ್ವಹಣೆ ಮಾಡದಿರುವುದನ್ನು ಪೊಲೀಸ್ ಇಲಾಖೆ ಗಮನಕ್ಕೆ ತರಲಾಗಿದೆ.
ಎನ್. ಗಣೇಶ್ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ

ಸಿಸಿ ಕ್ಯಾಮರಾ ದುರಸ್ತಿಗೆ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಲಾಗಿದೆ. ಅವರು ಸಹಕಾರ ನೀಡಿದರೆ ಅಪರಾಧ ಪ್ರಕರಣ ನಿಯಂತ್ರಣಕ್ಕೆ ಅನುಕೂಲ ವಾಗಲಿದೆ. ರಾತ್ರಿ ವೇಳೆ ಬೆಂಗಳೂರು ನಗರದಿಂದ ಬರುವ ಯುವಕರ ದರೋಡೆ ವೀಲಿಂಗ್‌ನಂತಹ ಪುಂಡಾಟಿಕೆ ತಡೆಗಟ್ಟಬಹುದು. ಅಪರಾಧ ಜಗತ್ತಿನಲ್ಲಿ ನೆಲಮಂಗಲ ನಗರಕ್ಕಿರುವ ಕಳಂಕ ತೊಡೆದು ಹಾಕಬಹುದಾಗಿದೆ.
ಶಶಿಧರ್ ಇನ್‌ಸ್ಪೆಕ್ಟರ್ ನಗರ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net