ಕ್ಷಮಯಾ ಧರಿತ್ರಿ ಹೆತ್ತವ್ವ

16 hulsur 01
Published on

ಹುಲಸೂರು: ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿ ತಿಳಿವಳಿಕೆ ಹೇಳುವುದು ಅವಶ್ಯ. ಕ್ಷಮಿಸುವ ಗುಣ ತಾಯಿ ರೂಪದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಬಾಲಕಿ ಅಮೃತಾ ಗಿರಣಿ ಹೇಳಿದ್ದರು.

ಗೋರ್ಟಾ (ಬಿ) ಗ್ರಾಮದ ಲಿಂಗಾಯತ ಮಹಾಮಠದ ಆವರಣದಲ್ಲಿ ಮರಣವೇ ಮಹಾನವಮಿ ಮಹೋತ್ಸವದಲ್ಲಿ ಭಾನುವಾರ ಏರ್ಪಡಿಸಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿಯ ವೃತ್ತಿಯು ಆತನ ಸಂಸ್ಕಾರ ತೋರಿಸುತ್ತದೆ. ಕ್ಷಮೆಗೆ ಪ್ರೇರಣೆ ತಾಯಿ. ಮಗು ಏನೇ ತಪ್ಪು ಮಾಡಿದರೂ ತಾಯಿ ಕ್ಷಮಿಸುತ್ತಾಳೆ. ಅದೇ ರೀತಿ ೧೨ನೇ ಶತಮಾನದಲ್ಲಿ ಗುರು ಬಸವಣ್ಣನವರು ಮನೆಗೆ ಕಳ್ಳರು ಬಂದರೂ ಕ್ಷಮಿಸಿದರು. ಅಂತಹ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿನಿ ಅಂಬಿಕಾ ಆರ್. ಮಾತನಾಡಿ, ವ್ಯಕ್ತಿಯ ಬಾಳಿನಲ್ಲಿ ಪರಮ ಸತ್ಯದ ಸೂರ್ಯ ಉದಯವಾಗುವ ಮುನ್ನ ಬೆಳಕನ್ನು ಗ್ರಹಿಸುವ ಶಕ್ತಿ ನೀಡಲು ಗುರು ಬೇಕು. ಲಿಂಗ ಉದಯವಾಗುವ ಮುನ್ನ ಗುರುವಿನ ಉದಯ ಆಗಬೇಕು. ಯಾರ ಬಾಳಿನಲ್ಲಿ ಗುರುವಿನ ಉದಯ ಆಗುವುದೋ ಅಲ್ಲಿ ಲಿಂಗ ಉದಯ ಆಗಲು ತಡವಿಲ್ಲ ಎಂದರು.

ಶ್ರೀ ಪ್ರಭುದೇವರು ಮಾತನಾಡಿ, ಗುರುವಿನ ಕೈಹಿಡಿದು ದೇವ ಪಥ ಪಯಣಿಗರಾದರೆ, ಪಥ ಭ್ರಷ್ಟರಾಗುವ ಭಯವಿಲ್ಲ. ಸರಿ ತಪ್ಪುಗಳ ಗೊಂದಲವಿಲ್ಲ, ಕಳವಳ, ಕಾತರವಿಲ್ಲ. ಗುರು ದೊರೆಯದ ಮುನ್ನ ಇರುವುದೆಲ್ಲ ಕತ್ತಲೆ ಎಂದರು.

ಸುರೇಶ ಅಕ್ಕಣ್ಣ ಮಾತನಾಡಿದರು. ಶಿವರಾಜ ಕನಕಟ್ಟೆ, ಬಾಬುರಾವ ರಾಜೋಳೆ, ಸಂಗಪ್ಪ ರಾಜೋಳೆ, ಕರುಣಾದೇವಿ ಕಣಜೆ, ಶ್ರೀದೇವಿ, ಬಸವರಾಜ ರಾಜೋಳೆ, ಗೋದಾವರಿ ರಾಜೋಳೆ, ವಿನೋದ ಕಾಂಬಳೆ ಇತರರಿದ್ದರು. ಅಮುಲ ಬಿರಾದಾರ ವಚನ ಗಾಯನ ಮಾಡಿದರು. ಉಷಾ ಹತ್ತೆ ಸ್ವಾಗತಿಸಿದರು. ಪ್ರಜ್ವಲ ರಾಜೋಳೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net