ಕ್ಷಣಿಕ ಸುಖದಿಂದ ದೂರವಿರಿ: ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ರಾಜಶೇಖರ್ ಸಲಹೆ

2
Published on

ಚಿಕ್ಕಬಳ್ಳಾಪುರ: ಮಾದಕ ವ್ಯಸನವು ಅಪರಾಧ ಮತ್ತು ಅನಾರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ರಾಜಶೇಖರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಿಡಗಾನಹಳ್ಳಿಯಲ್ಲಿನ ನಾಗಾರ್ಜನ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಜನರೇ ಭವಿಷ್ಯದ ದೇಶದ ಆಸ್ತಿ. ಭವ್ಯ ಭಾರತದ ನಿರ್ಮಾಪಕರು. ಇದರ ಜವಾಬ್ದಾರಿಯನ್ನರಿತು ಪ್ರತಿಯೊಬ್ಬರು ಕ್ಷಣಿಕ ಸುಖದ ಮತ್ತು ಜೀವನಕ್ಕೆ ಮಾರಕವಾದ ಮಾದಕ ವಸ್ತುಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.

ಚಿಕ್ಕ ವಯಸ್ಸಿನಲ್ಲಿಯೇ ಅನೇಕ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ನ್ಯಾಯಾಲಯದ ಮೆಟ್ಟಿಲುಗಳನ್ನು ಏರಿ, ಅಪರಾಧಕ್ಕೆ ಶಿಕ್ಷೆಗೊಳಗಾಗುವ ಮೂಲಕ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.

ಒಳ್ಳೆಯ ಹವ್ಯಾಸಗಳು ಮತ್ತು ಚಿಂತನೆಗಳು ನಿಜವಾದ ಸುಖವನ್ನು ನೀಡುತ್ತವೆ. ಇದಕ್ಕೆ ನಿರಂತರ ಯೋಗಾಭ್ಯಾಸ, ಪುಸ್ತಕ ಓದುವಿಕೆ, ಸಜ್ಜನರ ಸಹವಾಸ ಸೇರಿದಂತೆ ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇತರರಿಗೂ ಉತ್ತಮ ಮಾರ್ಗದರ್ಶನದ ಮೂಲಕ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮತ್ತು ದುಶ್ಚಟಗಳನ್ನು ದೂರವನ್ನಾಗಿಸಲು ಸರ್ಕಾರ ಸೇರಿ ಸ್ವಯಂ ಸೇವಾ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಇವು ಮತ್ತಷ್ಟು ಹೆಚ್ಚಾಗಬೇಕು. ಕ್ರೀಡಾ ಮತ್ತು ಸಾಂಸ್ಕೃತಿಕ ತರಬೇತಿಯೊಂದಿಗೆ ಯುವ ಜನಾಂಗವನ್ನು ಒಳ್ಳೆಯ ಮಾರ್ಗದತ್ತ ಸಾಗಲು ಪ್ರೇರೇಪಿಸಬೇಕು. ಅದರಲ್ಲೂ ಮದ್ಯ ವ್ಯಸನಿಗಳನ್ನು ಪತ್ತೆ ಹಚ್ಚಿ, ಪುನರ್ ವಸತಿ ನಿಲಯಗಳಲ್ಲಿ ಬದಲಾಯಿಸಬೇಕು ಎಂದರು.

ಮಾದಕ ವ್ಯಸನದಿಂದ ನಾನಾ ದುಷ್ಪಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ವ್ಯಸನಿ ಹೆಚ್ಚು ಪಾಲು ಬಾಧೆಗೊಳಗಾಗುವುದರ ಜತೆಗೆ ಸುತ್ತಲಿನ ಜನರು ಸಹ ಪರೋಕ್ಷವಾಗಿ ಸಮಸ್ಯೆಗಳನ್ನು ಎದುರಿಸಬೇಕು. ಬಲಿಷ್ಠ ಪ್ರಜಾ ಪ್ರಭುತ್ವ ದೇಶದ ನಿರ್ಮಾಣಕ್ಕೆ 18 ವಷರ್ ತುಂಬಿದ ಪ್ರತಿಯೊಬ್ಬ ಪ್ರಜೆಯು ಯಾವುದೇ ಆಮಿಷಗೊಳಗಾಗದೇ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ದುರುಪಯೋಗ ಮತ್ತು ಹಕ್ಕುಗಳಿಂದ ವಂಚಿತರಾಗಲು ಅವಕಾಶ ನೀಡಬಾರದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲಾಣ್ಯ ಅಧಿಕಾರಿ ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ರಾಜಾರೆಡ್ಡಿ, ಮಾನಸಿಕ ವೈದ್ಯರಾದ ಶಿವಕುಮಾರ್, ಹೇಮಂತ್ ಕುಮಾರ್, ಕಿಶೋರ್, ಲಾವಣ್ಯ, ನಂದಿ ಠಾಣೆಯ ಪಿ ಎಸ್ ಐ ಸುನೀಲ್, ನಾಗಾರ್ಜನ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ನಿರ್ದೇಶಕ ಗೋಪಾಲಕೃಷ್ಣ, ಪ್ರಾಂಶುಪಾಲ ಬಿ.ವಿ.ರವಿಶಂಕರ್ ಮತ್ತಿತರರು ಇದ್ದರು.

ನಿದರ್ಶನ ಹೇಳಿದ ನ್ಯಾಯಾಧೀಶ: ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ ಮತ್ತು ಆತನ ಕುಟುಂಬ ಅನುಭವಿಸಿದ ನೋವಿನ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ಹೇಳಿದರೆ, ದುಶ್ಚಟಗಳ ಕಡಿವಾಣದ ಮಾರ್ಗದ ಬಗ್ಗೆ ಡಿವೈಸ್‌ಪಿ ವಾಸುದೇವ ವಿವರಿಸಿದರು. ಗುಟ್ಕಾ ಸೇವಿಸುತ್ತಿದ್ದ ಒಳ್ಳೆಯ ಪರಿಪೂರ್ಣ ಸಂಪನ್ನ ವ್ಯಕ್ತಿಗೆ ಕ್ಯಾನ್ಸರ್ ಬಾಧಿಸಿತು. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಎಷ್ಟೇ ಹಣವನ್ನು ಖರ್ಚು ಮಾಡಿದರೂ ಆತನ ಜೀವ ಉಳಿಯಲಿಲ್ಲ. ಕುಟುಂಬವು ನೋವು ಅನುಭವಿಸಿತು ಎಂದು ಮಿಸ್ಕಿನ್ ಹೇಳಿದರು. ಚಿಕ್ಕಬಳ್ಳಾಪುರವನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಲಾಗುತ್ತಿದೆ. ಎಲ್ಲದಾದರೂ ಮಾದಕ ವಾಸ್ತುಗಳ ಮಾರಾಟ ಮತ್ತು ಸೇವನೆ ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ112 ಕ್ಕೆ ಕರೆ ಮಾಡಿ, ಮಾಹಿತಿ ನೀಡಬಹುದು. ದೂರು ನೀಡುವವರ ಹೆಸರನ್ನು ಸಂಪೂರ್ಣವಾ ಗೌಪ್ಯವಾಗಿಡಲಾಗುತ್ತದೆ ಎಂದು ಡಿವೈಎಸ್ಪಿ ತಿಳಿಸಿದರು.

ಸಂಚಾರಿ ವಾಹನಕ್ಕೆ ಚಾಲನೆ: ಮಾದಕ ವಸ್ತುಗಳ ಸೇವನೆ ವಿರೋಧಿ ಅರಿವು ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ನ್ಯಾಯಾಧೀಶರು ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net