ಕ್ವಾರಂಟೈನ್ ಸೀಲ್ ಇದ್ದ ವ್ಯಕ್ತಿ ಆಕಸ್ಮಿಕ ಸಾವು

13-GOKARNA DEATH PHOTO
Published on

ಗೋಕರ್ಣ: ಕ್ವಾರಂಟೈನ್ ಸೀಲ್ ಇರುವ ವ್ಯಕ್ತಿಯೊಬ್ಬರು ರಾಷ್ಟ್ರೀಯ ಹೆದ್ದಾರಿ 66ರ ಹಿರೇಗುತ್ತಿಯಲ್ಲಿ ಪ್ರಯಾಣದ ವೇಳೆ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಉಡುಪಿಯ ಕರುಣಾಕರ ಜಗನ್ನಾಥ ಶೆಟ್ಟಿ (75) ಮೃತಪಟ್ಟವರು. ಅವರು ತಮ್ಮ ಕುಟುಂಬದ ಐವರ ಜೊತೆ ಮುಂಬೈನಿಂದ ಉಡುಪಿಗೆ ಹೋಗುತ್ತಿರುವ ವೇಳೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.ಹಿರೇಗುತ್ತಿಯಲ್ಲಿ ಕಾರು ಕೆಟ್ಟು ನಿಂತಾಗ ಅದನ್ನು ನೋಡಲೆಂದು ಕೆಳಗಿಳಿದ ಅವರು ಹೆದ್ದಾರಿ ಬದಿಯಲ್ಲಿಯೇ ಕುಸಿದು ಬಿದ್ದು ಸಾವಿಗೀಡಾದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅವರ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗಿರುವುದರಿಂದ ಕೆಲ ಸಮಯ ಆತಂಕಕ್ಕೆ ಕಾರಣವಾಯಿತು. ಸ್ಥಳೀಯರು ಸ್ಥಳಕ್ಕೆ ಹೋಗಲು ಹೆದರಿದರು. ಸುಮಾರು 2 ಗಂಟೆಗಳ ಹೊತ್ತು ಶವ ರಸ್ತೆ ಪಕ್ಕದಲ್ಲೇ ಇತ್ತು. ನಂತರ ಕುಮಟಾ ತಾಲೂಕು ಆಸ್ಪತ್ರೆಗೆ ಶವವನ್ನು ಸಾಗಿಸಲಾಯಿತು. ಅವರ ಕೈ ಮೇಲಿನ ಸೀಲ್ ಬಗ್ಗೆ ಮಾತನಾಡಿದ ಸಿಪಿಐ ಪರಮೇಶ್ವರ ಗುನಗ ಅವರು, ‘ಮುಂಬೈನಿಂದ ಬಂದ ಅವರಿಗೆ ಕರ್ನಾಟಕ ಗಡಿಯಲ್ಲಿ ಈ ಸೀಲ್ ಹಾಕಲಾಗಿದೆ. ವೈದ್ಯಾಧಿಕಾರಿಗಳ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net