

ಮುಂಡರಗಿ, ಕರೊನಾ, ಕ್ವಾರಂಟೈನ್ ವಿದ್ಯಾರ್ಥಿ, ಪರೀಕ್ಷೆ ನಿರಾಕರಣೆ, Mundaragi, Corona, Quarantine student, refusal of examination
ಮುಂಡರಗಿ: ಕರೊನಾ ಸೋಂಕಿತನ ಸಂಪರ್ಕದಲ್ಲಿದ್ದ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ 16 ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಬುಧವಾರ ಸಮಾಜ-ವಿಜ್ಞಾನ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅವಕಾಶ ನೀಡಲಿಲ್ಲ.
ಬೆಣ್ಣಿಹಳ್ಳಿ ಗ್ರಾಮದಲ್ಲಿ ಮೈಸೂರಿನಿಂದ ಬಂದಿದ್ದ ಕೆಎಸ್ಆರ್ಟಿಸಿ ಚಾಲಕನಿಗೆ ಜೂ. 29ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಸೋಂಕಿತನ ಸಂಪರ್ಕದಿಂದ ಕ್ವಾರಂಟೈನ್ನಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಲಾಗುವುದು ಎಂದು ಬಿಇಒ ಗಂಗಾಧರ ಅಣ್ಣಿಗೇರಿ ತಿಳಿಸಿದ್ದಾರೆ.
ಹೆಚ್ಚಿದ ಆತಂಕ:
ಮೈಸೂರಿನಿಂದ ಚಾಲಕ ಜೂ. 27ರಂದು ಬೆಣ್ಣಿಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ. ಚಾಲಕನ ಸಂಪರ್ಕದಲ್ಲಿದ್ದ ವಿದ್ಯಾರ್ಥಿ ಜೂ. 29ರಂದು ಪರೀಕ್ಷೆ ಬರೆದಿದ್ದಾನೆ. ಜೂ. 29ರಂದೇ ಚಾಲಕನಿಗೆ ಸೋಂಕು ದೃಢವಾಗಿದೆ. ವಿದ್ಯಾರ್ಥಿಯು ಜೆ.ಟಿ. ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ಮೂರು ಪರೀಕ್ಷೆ ಬರೆದಿದ್ದಾನೆ. ಇದು ಶಿಕ್ಷಣ ಇಲಾಖೆ ಹಾಗೂ ವಿದ್ಯಾರ್ಥಿಗಳ ಪಾಲಕರಲ್ಲಿ ಆತಂಕ ಹುಟ್ಟಿಸಿದೆ.
ವಿದ್ಯಾರ್ಥಿನಿ ಅಸ್ವಸ್ಥ:
ಸ್ಥಳೀಯ ಎಸ್ಎಫ್ಎಸ್ ಶಾಲೆಯಲ್ಲಿ ಬುಧವಾರ ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆ ವಿದ್ಯಾರ್ಥಿನಿಯೊಬ್ಬಳು ತಲೆ ಸುತ್ತು ಬಂದು ಬಿದ್ದಳು. ಸ್ಥಳಕ್ಕಾಗಮಿಸಿದ ಬಿಇಒ ಗಂಗಾಧರ ಅಣ್ಣಿಗೇರಿ ಮತ್ತು ಶಿಕ್ಷಕರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ವಿದ್ಯಾರ್ಥಿನಿ ಚೇತರಿಸಿಕೊಂಡ ನಂತರ 11 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಯಿತು.
ಬಡಾವಣೆ ಮಾರ್ಗ ಬಂದ್
ರೋಣ: ಬೆಂಗಳೂರಿನ ಹೋಟೆಲ್ಲೊಂದರಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಬಾಬು ಜಗಜೀವನರಾಮ ಬಡಾವಣೆಯ 21 ವರ್ಷದ ಯುವಕನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಪುರಸಭೆಯವರು ಮುಂಜಾಗ್ರತೆ ಕ್ರಮದಿಂದ ಬಡಾವಣೆಗೆ ಹೋಗುವ ಮಾರ್ಗಗಳನ್ನು ಬಂದ್ ಮಾಡಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಬಾಬು ಜಗಜೀವನರಾಮ ಬಡಾವಣೆಗೆ ಆಗಮಿಸಿ ಕರೊನಾ ಸೋಂಕಿತ ವ್ಯಕ್ತಿಯನ್ನು ಗದಗ ಕೋವಿಡ್-19 ಆಸ್ಪತ್ರೆಗೆ ರವಾನಿಸಿದರು. ಆತನ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ವಸತಿ ಗೃಹದಲ್ಲಿ ಕ್ವಾರಂಟೈನ್ ಮಾಡಿದ್ದಾರೆ.
ಇಂದು ಇಬ್ಬರಿಗೆ ಸೋಂಕು ದೃಢ
ಗದಗ: ಜಿಲ್ಲೆಯಲ್ಲಿ ಬುಧವಾರ ಮತ್ತೆ ಇಬ್ಬರಿಗೆ ಕರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಧಾರವಾಡ ಜಿಲ್ಲೆಯಿಂದ ಆಗಮಿಸಿದ್ದ ನರಗುಂದ ಪಟ್ಟಣದ ಗಡಿ ಓಣಿಯ ನಿವಾಸಿ 39 ವರ್ಷದ ಪುರುಷ ಮತ್ತು ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ್ದ ರೋಣ ಪಟ್ಟಣದ ಬಾದಾಮಿ ರಸ್ತೆಯಲ್ಲಿರುವ ಕನ್ನಡ ಶಾಲೆ ಹತ್ತಿರದ ನಿವಾಸಿ 21 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಸದ್ಯ ಸೋಂಕಿತರನ್ನು ಜಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 178 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. 53 ಜನರು ಗುಣವಾಗಿದ್ದಾರೆ. 122 ಸಕ್ರಿಯ ಕೇಸ್ಗಳು ಇವೆ.
EndFragment