

ಚಿಕ್ಕಬಳ್ಳಾಪುರ: ಜಿಲ್ಲೆಯ ಕರೊನಾ ಸೋಂಕಿತರ ನೇರ ಸಂಪರ್ಕ ಮತ್ತು ದ್ವಿತೀಯ ಸಂಪರ್ಕದಿಂದ ಕ್ವಾರಂಟೈನ್‌ನಲ್ಲಿದ್ದ ಅನೇಕರು ಬಂಧನದಿಂದ ಮುಕ್ತಿ ಪಡೆಯುತ್ತಿದ್ದು ಆರೋಗ್ಯ ಇಲಾಖೆ ನಿಗಾದಲ್ಲಿದ್ದಾರೆ.
ಇಲ್ಲಿಯವರೆಗೂ ವಿದೇಶಗಳಿಂದ ಜಿಲ್ಲೆಗೆ 200 ಮಂದಿ ಬಂದಿದ್ದು ಇವರೊಂದಿಗೆ 544 ಮಂದಿ ನೇರ ಸಂಪರ್ಕದಲ್ಲಿದ್ದರು. ಇದರಿಂದಾಗಿ 744 ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಈ ಪೈಕಿ ಈಗಾಗಲೇ 338 ಮಂದಿ 28 ದಿನ ಕ್ವಾರಂಟೈನ್, 251 ಮಂದಿ 14 ದಿನ ಕ್ವಾರಂಟೈನ್ ಮುಗಿಸಿದ್ದಾರೆ. 155 ಮಂದಿ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿದ್ದಾರೆ.
ಸೋಂಕಿತನ ಟ್ರಾವೆಲ್ ಹಿಸ್ಟರಿಗೆ ಅನುಗುಣವಾಗಿ ಸೋಂಕಿತನೊಂದಿಗೆ ತಿರುಗಾಡಿದ್ದವರು,
ನೇರ ಸಂಪರ್ಕ ಮತ್ತು ನೇರ ಸಂಪರ್ಕಿತ ಶಂಕಿತರೊಂದಿಗೆ ಸುತ್ತಾಡಿದವರನ್ನು ದ್ವಿತೀಯ ಸಂಪರ್ಕಿಗಳೆಂದು ಗುರುತಿಸಲಾಗುತ್ತದೆ.
ಈ ಕೆಲವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಕಾಣಿಸಿಕೊಳ್ಳುವುದಿಲ್ಲ, ಆದ್ದರಿಂದ ಶಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಗಂಟಲುಸ್ರಾವ ಹಾಗೂ ರಕ್ತದ ಪರೀಕ್ಷೆ ನಡೆಸಲಾಗುತ್ತದೆ, ಪಾಸಿಟಿವ್ ಬಂದರೆ ಕ್ವಾರಂಟೈನಲ್ಲಿದ್ದವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಚೇತರಿಕೆಗೆ ಅನುಗುಣವಾಗಿ ಕ್ವಾರಂಟೈನ್ ಮತ್ತು ಹೋಂ ಕ್ವಾರಂಟೈನಲ್ಲಿರಿಸಲಾಗುತ್ತದೆ.
ಸೋಂಕಿತ ವರದಿ ನೆಗಟಿವ್ ಬರುವವರೆಗೂ ನಿರಂತರವಾಗಿ ಗಂಟಲು ಸ್ರಾವ ಮತ್ತು ರಕ್ತವನ್ನು ಪರೀಕ್ಷಿಸಲಾಗುತ್ತದೆ. ಕನಿಷ್ಠ ಒಬ್ಬ ರೋಗಿಗೆ ಕನಿಷ್ಠ 3 ಬಾರಿಯಾದರೂ ಪರೀಕ್ಷೆ ನಡೆಯುತ್ತದೆ. ಶಂಕಿತರಲ್ಲಿ ಸೋಂಕು ಇಲ್ಲದಿರುವುದನ್ನು ದೃಢಪಡಿಸಿಕೊಳ್ಳಲಾಗುತ್ತದೆ. 14 ದಿನಗಳ ಕ್ವಾರಂಟೈನ್ ಮತ್ತು 28 ದಿನಗಳ ಕ್ವಾರಂಟೈನ್ ಲೆಕ್ಕಾಚಾರದಲ್ಲಿ ಎಲ್ಲರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿ, ಮಾಹಿತಿ ಪಡೆದುಕೊಳ್ಳಲಾಗುತ್ತದೆ.
ಸೋಂಕಿತರ ಸಂಪರ್ಕಿಗಳು : 91 ಸಂಖ್ಯೆಯ ರೋಗಿಯೊಂದಿಗೆ 95 ಮಂದಿ, 250 ಸಂಖ್ಯೆ ರೋಗಿಯೊಂದಿಗೆ 15 ಮಂದಿ (ಇದರಲ್ಲಿ ಮೂರು ಪಾಸಿಟಿವ್, ರೋಗಿ ಸಂಖ್ಯೆ 338, 339, 340), 338, 339, 340 ಸಂಖ್ಯೆಯ ರೋಗಿಗಳೊಂದಿಗೆ 13 ಮಂದಿ, 451 ಸಂಖ್ಯೆಯ ರೋಗಿಯೊಂದಿಗೆ 28 ಮಂದಿ, 488 ಸಂಖ್ಯೆಯ ರೋಗಿಯೊಂದಿಗೆ 24 ಮಂದಿ ಸಂಪರ್ಕದಲ್ಲಿದ್ದರು. ಜಿಲ್ಲೆಯಲ್ಲಿ ಇದುವರೆಗೂ 18 ಪ್ರಕರಣಗಳು ಪತ್ತೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. 11 ಮಂದಿ ಚೇತರಿಸಿಕೊಂಡು ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ 1752 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು 1250 ಮಾದರಿಗಳು ನೆಗೆಟಿವ್ ಬಂದಿದೆ. 484 ಮಾದರಿಗಳ ಪರೀಕ್ಷಾ ವರದಿ ಎದುರು ನೋಡಲಾಗುತ್ತಿದೆ. ಈಗಾಗಲೇ ಸೋಂಕಿತರು ಪತ್ತೆಯಾದ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನ 31 ವಾರ್ಡ್‌ಗಳನ್ನು ಸೀಲ್ ಡೌನ್ ಮಾಡಲಾಗಿದ್ದು ರ‌್ಯಾಪಿಡ್ ಟೆಸ್ಟ್ ಮಾಡಲಾಗುತ್ತಿದೆ. ಮೊಬೈಲ್ ನೆಟ್ ವರ್ಕ್ ತಂತ್ರಜ್ಞಾನದ ಮೂಲಕ ಕ್ವಾರಂಟೈನಿಗಳ ಮೇಲೆ ನಿಗಾ ವಹಿಸಲಾಗಿದೆ.
ಜಿಲ್ಲೆಯಲ್ಲಿ 338 ಮಂದಿ 28 ದಿನ, 251 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದು 155 ಮಂದಿ 14 ದಿನಗಳ ಕ್ವಾರಂಟೈನಲ್ಲಿದ್ದಾರೆ. ಎಲ್ಲರ ಮೇಲೂ ನಿಗಾವಹಿಸಲಾಗಿದೆ. ಬಿ.ಎಂ.ಯೋಗೀಶ್‌ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ