

ಔರಾದ್: ವನಮಾರಪಳ್ಳಿ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿದ್ದ ನವ ವಿವಾಹಿತ ಮಂಗಳವಾರ ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮ ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿ ನಾರಾಯಣಪುರದ ಸಚಿನ್ ತೇಜೇರಾವ ಜಾಧವ್ (22) ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾನೆ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ 19ರಂದು ಪತ್ನಿ ಶುಭಾಂಗಿ ಜತೆ ಮುಂಬೈನಿಂದ ಬಂದಿದ್ದರಿಂದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಆತ್ಮಹತ್ಯೆಗೆ ಪತಿ-ಪತ್ನಿ ನಡುವಿನ ಜಗಳ ಜತೆಗೆ ಕೌಟುಂಬಿಕ ಸಮಸ್ಯೆ ಕಾರಣ ಎನ್ನಲಾಗಿದೆ.
ಸಚಿನ್ ಔರಾದ್ನ ಶುಭಾಂಗಿ ಜತೆಗೆ ಪ್ರೀತಿಸುತ್ತಿದ್ದ. ಮೂರು ತಿಂಗಳ ಹಿಂದಷ್ಟೇ ಈಕೆಗೆ ಮುಂಬೈಗೆ ಒಯ್ದು ಮದುವೆ ಮಾಡಿಕೊಂಡಿದ್ದ ಎನ್ನಲಾಗಿದೆ. ಲಾಕ್ಡೌನ್ ಸಮಸ್ಯೆ ಕಾರಣ ಸ್ವಗ್ರಾಮದತ್ತ ಹೊರಟು ಕ್ವಾರಂಟೈನ್ ಕೇಂದ್ರ ಸೇರಿದ್ದರು. ಈ ಕೇಂದ್ರದಲ್ಲಿ ಇಬ್ಬರಿಗೂ ಬೇರೆ ಬೇರೆ ಕೋಣೆಯಲ್ಲಿ ಇಡಲಾಗಿತ್ತು. ಮಂಗಳವಾರ ಬೆಳಗ್ಗೆ ನೋಡಿದಾಗ ಸಚಿನ್ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದದ್ದು ಕಂಡಿದೆ.
ತಡರಾತ್ರಿವರೆಗೆ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿತ್ತು. ಇನ್ನೊಂದೆಡೆ ಪ್ರೀತಿಸಿ ಮದುವೆಯಾಗಿರುವ ಕಾರಣ ಸಚಿನ್ ಕೆಲ ದಿನಗಳಿಂದ ಭೀತಿಗೆ ಒಳಗಾದಂತೆ ಕಾಣುತ್ತಿದ್ದ ಎನ್ನಲಾಗಿದೆ. ಈತನ ಸಾವು ಅನೇಕ ಸಂದೇಹ, ಪ್ರಶ್ನೆಗಳನ್ನು ಹುಟ್ಟು ಹಾಕಿರುವ ಕಾರಣ ಪೊಲೀಸ್ ತನಿಖೆ ನಂತರವೇ ನಿಖರ ಮಾಹಿತಿ ತಿಳಿಯಲಿದೆ. ಮೃತನ ತಂದೆ ತೇಜೇರಾವ ನೀಡಿದ ದೂರಿನನ್ವಯ ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.