

ಕೂಡ್ಲಿಗಿ: ಪಪಂಗೆ ಸೇರಿದ ಗೋದಮಿನಲ್ಲಿ ಸಂಗ್ರಹಿಸಿದ್ದ ಸಿಲಿಂಡರ್‌ನಿಂದ ಮಂಗಳವಾರ ರಾತ್ರಿ ಕ್ಲೋರಿನ್ ಸೋರಿಕೆಯಾದ ಹಿನ್ನೆಲೆಯಲ್ಲಿ 13 ಜನ ಅಸ್ವಸ್ಥರಾಗಿದ್ದಾರೆ. ಸ್ವಚ್ಛತಾ ಕಾರ್ಯಕ್ಕೆ ಬಳಸುವುದಕ್ಕಾಗಿ ಕ್ಲೋರಿನ್ ಇರುವ ಸಿಲಿಂಡರ್ ಇಡಲಾಗಿತ್ತು.
ರಾತ್ರಿ ಸಿಲಿಂಡರ್‌ನಿಂದ ರಾಸಾಯನಿಕ ಸೋರಿಕೆಯಾಗಿದ್ದು, ಬ್ಲೀಚಿಂಗ್ ಪೌಡರ್‌ನೊಂದಿಗೆ ಬೆರೆತು ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಕೆಲವರು ಪಪಂ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಗೋದಾಮಿನ ಬಾಗಿಲು ತೆರೆದಿದ್ದಾರೆ.
ಆಗ ರಾಸಾಯನಿಕ ಬೆರೆತ ವಾಯುವಿನಿಂದ ಅಗ್ನಿಶಾಮಕ ದಳದ 6 ಜನ, ಗೃಹರಕ್ಷಕ ದಳ ಹಾಗೂ ಪಪಂನ ಒಬ್ಬರು ಹಾಗೂ ಇತರ ಐದು ಜನರು ಆಸ್ವಸ್ಥರಾಗಿದ್ದು, ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಬಳ್ಳಾರಿಯ ಬಿಮ್ಸ್‌ಗೆ ಕಳಿಸಲಾಗಿದೆ. ನಂತರ ಉಳಿದ ಸಿಬ್ಬಂದಿ ಸುರಕ್ಷತಾ ಕ್ರಮಗಳೊಂದಿಗೆ ಗೋದಾಮಿನ ಗೋಡೆ ಒಡೆದು ಸಿಲಿಂಡರನ್ನು ಊರ ಹೊರಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಅಸ್ವಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು. ಸ್ಥಳಕ್ಕೆ ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಪ್ರಲ್ಹಾದ್ ಆರ್.ಚನ್ನಗಿರಿ, ಪಿಎಸ್‌ಐ ಸಿ. ಪ್ರಕಾಶ್ ಭೇಟಿ ನೀಡಿದ್ದರು.