ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ ಜನಪ್ರಿಯ ಆಸ್ಪತ್ರೆಯ ತಜ್ಞ ವೈದ್ಯರು

ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ ಜನಪ್ರಿಯ ಆಸ್ಪತ್ರೆಯ ತಜ್ಞ ವೈದ್ಯರು
Published on

ಹಾಸನ: ನಗರದ ಜನಪ್ರಿಯ ಆಸ್ಪತ್ರೆಯಲ್ಲಿ ಎರಡು ವಿಶೇಷ ಕ್ಲಿಷ್ಟಕರ ಪ್ರಕರಣಗಳಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಅಬ್ದುಲ್ ಬಶೀರ್ ತಿಳಿಸಿದರು.

5 ವರ್ಷದ ಮಗುವಿಗೆ ಹುಟ್ಟಿನಿಂದಲೇ ಮೆದುಳು ನರಗಳು ಹೊರಗೆ ಬಂದು ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿತ್ತು. ಹಾಗೆ 23 ವರ್ಷದ ಯುವತಿಗೆ ಮೂಳೆ ಕ್ಯಾನ್ಸರ್‌ನಿಂದ ಶೇ. 90ರಷ್ಟು ಕಾಲಿನ ಮೂಳೆ ನಶಿಸಿಹೋಗಿತ್ತು. ಈ ಎರಡು ಶಸ್ತ್ರಚಿಕಿತ್ಸೆ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಉಚಿತವಾಗಿ ನಡೆಸಿರುವುದಾಗಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚನ್ನರಾಯಪಟ್ಟಣ ತಾಲೂಕಿನ 23 ವಯಸ್ಸಿನ ಯುವತಿ ಜನಪ್ರಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದರು. ಅವರಿಗೆ ಕಾಲಿನ ಮೂಳೆ ಶೇ.90ರಷ್ಟು ನಶಿಸಿಹೋಗಿತ್ತು. ಬೆಂಗಳೂರು, ಮಂಗಳೂರಿನ ದೊಡ್ಡ ದೊಡ್ಡ ಆಸ್ಪತ್ರೆಗಳಿಗೂ ತೋರಿಸಿದರೂ ಚಿಕಿತ್ಸೆ ಸಾಧ್ಯವಿಲ್ಲ. ಮಾಡಿದರೂ ಶೇಕಡ ಶೇ. 80ರಷ್ಟು ಯಶಸ್ವಿಯಾಗಲ್ಲ, ಮಾತ್ರವಲ್ಲ ಕಾಲನ್ನು ತೆಗೆಯುವ ಪರಿಸ್ಥಿತಿ ಬರಬಹುದೆಂದು ಹೇಳಿದ್ದರಂತೆ. ಆರ್ಥಿಕವಾಗಿ ಹಿಂದುಳಿದಿದ್ದರಿಂದ ಅವರು ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ಬಂದರು. ಅವರನ್ನು ಪರೀಕ್ಷಿಸಿದಾಗ ಕಾಲಿನ ತೊಡೆ ಭಾಗದ ಮೂಳೆಗೆ ಕ್ಯಾನ್ಸರ್ ಆಗಿ ಸಂಪೂರ್ಣವಾಗಿ ತಿಂದು ಹಾಕಿತ್ತು. ಹಾಸನದಲ್ಲಿ ಹಿಂದೆಂದೂ ಮಾಡದಂತಹ ವಿಶೇಷವಾದ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇತ್ತು. ಹಾಗಾಗಿ ಮೂಳೆಯನ್ನು ತೆಗೆದು ಕೃತಕ ಮೂಳೆ ಜೋಡಣೆ ಮಾಡಲಾಯಿತು. ಸುಮಾರು 8 ಗಂಟೆಗಳ ಕಾಲ ತಜ್ಞ ವೈದ್ಯರಾದ ಡಾ.ವಿ.ಕೆ. ಅಬ್ದುಲ್ ಬಶೀರ್, ಡಾ.ರಜತ್, ಡಾ. ಲಿಂಗರಾಜ್, ಡಾ.ನವನೀತ್ ಮತ್ತು ತಂಡದ ಪರಿಶ್ರಮದಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೃತಕ ಮೂಳೆಯ ಜೋಡಣೆ ಕಾರ್ಯ ಇದಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಯುವತಿ ಎರಡೇ ದಿನಕ್ಕೆ ನಡೆಯಲು ಆರಂಭಿಸಿದರು. ಅವರು ಈ ಹಿಂದೆ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಾಯಿಲೆಯಿಂದ ಎರಡು ವರ್ಷಗಳ ಹಿಂದೆಯೇ ಕೆಲಸಕ್ಕೆ ಹೋಗುವುದನ್ನು ಬಿಟ್ಟಿದ್ದರು. ಈಗ ಮತ್ತೆ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಾ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ 2.5 ಲಕ್ಷ ರೂ.ನಿಂದ 3 ಲಕ್ಷ ರೂ.ವರೆಗೂ ಖರ್ಚು ತಗುಲಲಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ 10 ಲಕ್ಷ ರೂ. ವರೆಗೂ ವೆಚ್ಚವಾಗಲಿದೆ. ನಾವು ಯಶಸ್ವಿನಿ ಯೋಜನೆಯಡಿ ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕಿನ 5 ವರ್ಷ ಮಗುವಿಗೆ ಹುಟ್ಟಿನಿಂದಲೇ ಬೆನ್ನು ಮೂಳೆಯು ಮೆದುಳು ಬಳ್ಳಿಯಿಂದ ಮೆದುಳು ನರಗಳ ಹೊರೆಗೆ ಬಂದಿದ್ದು, ಈ ಕಾಯಿಲೆ ವಿರಳವಾಗಿದ್ದು ಶಸ್ತ್ರಚಿಕಿತ್ಸೆ ತುಂಬಾ ಕ್ಲಿಷ್ಟಕರವಾಗಿತ್ತು, ಕಾಲಿನ ನರಗಳ ಚಲನವಲನಗಳನ್ನು ಪ್ರತ್ಯೇಕವಾದ ಯಂತ್ರಗಳಲ್ಲಿ ಗಮನಹರಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದರು.

ಈ ಶಸ್ತ್ರಚಿಕಿತ್ಸೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಎರಡು ಕಾಲುಗಳು ನಿಷ್ಕ್ರಿಯವಾಗುವ ಸಾಧ್ಯತೆ ಇತ್ತು. ಆದಕಾರಣ ಪ್ರತ್ಯೇಕವಾದ ಯಂತ್ರಗಳನ್ನು ಬಳಸಿ ಸತತ 6 ಗಂಟೆಗಳ ಕಾಲ ಜನಪ್ರಿಯ ಆಸ್ಪತ್ರೆಯ ನರರೋಗ ತಜ್ಞ ಡಾ. ಚೈತನ್ಯ, ಕೀಲು ಮತ್ತು ಮೂಳೆ ತಜ್ಞ ಡಾ.ವಿ.ಕೆ ಅಬ್ದುಲ್ ಬಶೀರ್, ಅರವಳಿಕೆ ತಜ್ಞ ಡಾ.ಲಿಂಗರಾಜ್ ಮತ್ತು ತಂಡದ ಪರಿಶ್ರಮದಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈಗ ಮಗು ಆರೋಗ್ಯವಾಗಿ ಓಡಾಡಿಕೊಂಡಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net