ಬಳ್ಳಾರಿ : ನಗರದ ಹೃದಯಭಾಗದಲ್ಲಿರುವ ಗಡಗಿ ಚೆನ್ನಪ್ಪ ವೃತ್ತದಲ್ಲಿ ನ ಕ್ಲಾಕ್ ಟವರ್(ಗಡಿಯಾರ ಗೋಪುರ)ಕಾಮಗಾರಿ ಕಳೆದ ಎರಡು ವರ್ಷಗಳಿಂದ ಅಮೆಗಾತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಿ. ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಹಳೆಯ ಗಡಿಯಾರ ಗೋಪುರವನ್ನು ತೆರವುಗೊಳಿಸಿ, ರಾಜ್ಯದಲ್ಲಿಯೇ ಅತಿ ಎತ್ತರದ, ವಿದೇಶಿ ಲಿಬಿನಾನ್ ಮಾದರಿಯ ಗೋಪುರ ನಿರ್ಮಾಣಕ್ಕೆ ಮುಂದಾಗಿದ್ದರು. ಒಟ್ಟಾರೆ ಆರು ತಿಂಗಳ ಅವಧಿಯೊಳಗೆ ಏಳು ಕೋಟಿ ರೂ. ವೆಚ್ಚದಲ್ಲಿ 140 ಅಡಿ ಎತ್ತರದಲ್ಲಿ ಹತ್ತು ಅಂತಸ್ತುಗಳಲ್ಲಿ ಸುಂದರವಾದ ಗೋಪುರ ನಿರ್ಮಿಸುವುದಾಗಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಭೂಮಿಪೂಜೆ ನೆರವೇರಿಸಿದ ಕೆಲ ತಿಂಗಳಲ್ಲಿಯೇ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡಿತು. ಬಳಿಕ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಕಾಮಗಾರಿ ಅಮೆಗಾತಿಯಲ್ಲಿ ಸಾಗಿತು. ನಗರದ ಹೃದಯಭಾಗದಲ್ಲಿ ಆಗಿರುವುದರಿಂದ ನಿತ್ಯವು ಈ ವೃತ್ತದಲ್ಲಿ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಆದ್ದರಿಂದ, ಗೋಪುರದ ಸುತ್ತಲೂ ವೃತ್ತ ಅಗಲೀಕರಣಗೊಳಿಸಿ ನಂತರ ನಿರ್ಮಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು. ಆದರೆ, ಏಕಾಏಕಿ ಗೋಪುರ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಸುತ್ತಲೂ ಸ್ಥಳ ತೆರವುಗೊಳಿಸಿಲ್ಲ. ಡಿಸಿ ಕಚೇರಿ, ರೈಲು, ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳಿಗೆ ರಸ್ತೆ, ಶಾಲಾ ಕಾಲೇಜು, ಆಸ್ಪತ್ರೆ ಹಾಗೂ ವಿವಿಧ ಕಚೇರಿಗಳಿಗೆ ನಿತ್ಯ ಈ ವೃತ್ತದ ಮೂಲಕವೇ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಿಸಬೇಕಾದ ಅನಿವಾರ್ಯತೆಯಿಂದ ಟ್ರಾಫಿಕ್ ಸಮಸ್ಯೆ ತಪ್ಪಿಲ್ಲ. ಕೇವಲ ಆರು ತಿಂಗಳಲ್ಲಿಯೇ ಪೂರ್ಣಗೊಳಿಸುವುದಾಗಿ ಆರಂಭಿಸಿದ್ದ ಕಾಮಗಾರಿ ಎರಡು ವರ್ಷ ಕಳೆದರೂ ಮುಗಿಯುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ರಾಜಕೀಯ ಸಂಘರ್ಷ : ಹಳೆಯ ಗಡಿಯಾರ ಗೋಪುರವನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದರಿಂದ ಮಾಜಿ ಸಚಿವ ಬಿ.ನಾಗೇಂದ್ರ, ಕಾಂಗ್ರೆಸ್ ಬೆಂಬಲಿತ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ಬಿಜೆಪಿ ಹಾಗೂ ಶ್ರೀರಾಮುಲು ವಿರುದ್ಧ ಪ್ರತಿಭಟಿಸಿ, ತೆರವುಗೊಳಿಸದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಡಿಸಿಗೆ ಮನವಿ ಮಾಡಿದ್ದರು. ಬಳಿಕ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 140 ಅಡಿಯಿದ್ದ ಗೋಪುರವನ್ನು 117 ಅಡಿಗೆ ಇಳಿಸಲಾಯಿತು. ಅಲ್ಲದೆ, ಅನುದಾನವು ಕಡಿತಗೊಳಿಸಲಾಯಿತು. ಈಗಾಗಲೇ ಗೋಪುರದ ಮೇಲೆ ರಾಷ್ಟ್ರ ಲಾಂಛನ ಅಳವಡಿಸಿದ್ದು, ಇನ್ನೂ ಸಣ್ಣಪುಟ್ಟ ಕಾಮಗಾರಿ ನಡೆಯತ್ತಿರುವುದರಿಂದ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಈ ಎಲ್ಲ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಚುರುಕಾದ ಪಡೆದ ರಸ್ತೆ ಕಾಮಗಾರಿ : ಈ ವೃತ್ತದ ಮಾರ್ಗವಾಗಿರುವ ಅನಂತಪುರ ರಸ್ತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ರಸ್ತೆ ಮಾರ್ಗದಲ್ಲಿರುವ ಕಟ್ಟಡಗಳ ತೆರವು ಕಾರ್ಯ ವಿಳಂಬವಾಗಿತ್ತು. ಕೆಲ ಕಟ್ಟಡಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ತೆರವು ಕಾರ್ಯ ವಿಳಂಬವಾಗಿತ್ತು. ಸದ್ಯ ಎಲ್ಲ ಅಡೆ- ತಡೆಗಳ ಬಳಿಕ ಕೆಲಸ ಶುರು ಮಾಡಲಾಗಿದೆ. ಡಿಎಂಎಫ್ ಅನುದಾನದ ಐದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ, ಡಾಂಬರೀಕರಣ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಕೆಲ ದಿನಗಳಲ್ಲಿಯೇ ರಸ್ತೆ ಮಧ್ಯದಿಂದ ತಲಾ ಎರಡು ಬದಿ 21 ಮೀ. ಅಗಲೀಕರಣವಾಗಲಿದ್ದು, 500 ಮೀ. ಉದ್ದದ ರಸ್ತೆಯಾಗಿದೆ. ದ್ವಿಪಥ ರಸ್ತೆ ನಿರ್ಮಾಣ, ಡಿವೈಡರ್, ಹೈಮಾಸ್ಟ್ ದೀಪಗಳ ಅಳವಡಿಕೆಯಾಗಿ ರಸ್ತೆ ಸುಂದರರೀಕರಣಗೊಳ್ಳಲಿದೆ.
ಕೋಟ್… ಕ್ಲಾಕ್ ಟವರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನೂ ಲಿಫ್ಟ್ ಅಳವಡಿಕೆ ಮಾತ್ರ ಬಾಕಿಯಿದೆ. ಕೆಲವೇ ದಿನಗಳಲ್ಲಿ ಪೂರ್ಣಗೊಂಡ ನಂತರ ಉದ್ಘಾಟಿಸಿಲಾಗುವುದು.