ಕ್ಲಬ್‌ನಲ್ಲಿ ಜೂಜಾಡುತ್ತಿದ್ದ 37 ಜನರ ಬಂಧನ

ಕ್ಲಬ್‌ನಲ್ಲಿ ಜೂಜಾಡುತ್ತಿದ್ದ 37 ಜನರ ಬಂಧನ
Published on

ಹಾಸನ: ಜಿಲ್ಲೆಯಲ್ಲಿ ಹಿರೀಸಾವೆಯ ರಿಕ್ರಿಯೇಶನ್ ಕ್ಲಬ್ ಹಾಗೂ ಬಾಳ್ಳುಪೇಟೆಯ ಪ್ಲಾಂಟರ್ ಕ್ಲಬ್‌ನಲ್ಲಿ ಅಕ್ರಮವಾಗಿ ಹಣ ಕಟ್ಟಿಕೊಂಡು ಜೂಜಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ 75 ಸಾವಿರ ನಗದು ಸೇರಿದಂತೆ 37 ಜನರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದರು.

ಹಿರಿಸಾವೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಆ.25ರ ರಾತ್ರಿ 8 ಗಂಟೆಯಲ್ಲಿ ಹಿರೀಸಾವೆ ಟೌನ್‌ನ ಚೌಡೇಶ್ವರಿ ರಿಕ್ರಿಯೇಶನ್ ಕ್ಲಬ್‌ನಲ್ಲಿ ಹಣ ಕಟ್ಟಿಕೊಂಡು ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಮ್ಮ ಸಿಬ್ಬಂದಿ ದಾಳಿ, ನಡೆಸಿ 28 ಜನರನ್ನು ಬಂಧಿಸಿ, ಜೂಜಾಟಕ್ಕೆ ಪಣಕಿಟ್ಟಿದ್ದ 44,150 ನಗದು, 20 ಮೊಬೈಲ್ ಫೋನ್, ಎರಡು ಬೈಕ್, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಪ್ಲಾಂಟರ್ ಕ್ಲಬ್‌ನಲ್ಲಿ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಹಣ ಕಟ್ಟಿಕೊಂಡು ಜೂಜಾಡುತ್ತಿದ್ದ 9 ಜನರನ್ನು ಬಂಧಿಸಿದ್ದು, ಅವರಿಂದ 31,260 ನಗದು, 6 ಕಾರು, 12 ಮೊಬೈಲ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಎರಡು ಕ್ಲಬ್‌ಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು, ಪರವಾನಗಿ ರದ್ದುಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಜಿಲ್ಲೆಯಲ್ಲಿ ಕ್ಲಬ್ ಹೆಸರಿನಲ್ಲಿ ಈ ರೀತಿ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net