ಕ್ರೈಸ್ತರಿಗೆ ರಕ್ಷಣೆ ಒದಗಿಸಿ

18 ckm 3
ಚಿಕ್ಕಮಗಳೂರಿನ ಕಲ್ದೊಡ್ಡಿ ಗ್ರಾಮದಲ್ಲಿ ಬಡ ಕ್ರೈಸ್ತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಎಎಸ್‌ಪಿ ಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
Published on

ಚಿಕ್ಕಮಗಳೂರು: ನಗರದ ಕಲ್ಲುದೊಡ್ಡಿ ಬಡಾವಣೆಯಲ್ಲಿ ವಾಸಿಸುವ ಬಡ ಕ್ರೈಸ್ತ ಕುಟುಂಬಗಳಿಗೆ ಕಿಡಿಕೇಡಿಗಳಿಂದ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಅಖಿಲ ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಬೆನಡಿಕ್ಡ್ ಜೇಮ್ಸ್, ಕಳೆದ ಎರಡು ದಿನಗಳ ಹಿಂದೆ ಕಲ್ಲುದೊಡ್ಡಿ ಬಡಾವಣೆಯಲ್ಲಿ ಸಂಜೆ ನವೀನ್ ಜ್ಯೋತಿ ಎಂಬುವವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂ ಜನಾಂಗದ ಕೆಲವರು ಘರ್ಷಣೆ ಆರಂಬಿಸಿ, ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ನವೀನ್‌ ಅವರ ಕುಟುಂಬದ ಮೇಲೆ ಮನಬಂದಂತೆ ದಾಂಧಲೆ ನಡೆಸಿದ್ದಾರೆ ಎಂದು ದೂರಿದರು.

ಗಲಭೆಗೆ ಸಂಬಂಧಿಸಿದಂತೆ ಹತ್ತು ಮಂದಿಯ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಈ ಘಟನೆ ನಡೆದ ಮರುದಿನ ಆರೋಪಿಗಳ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಆರೋಪಿಗಳ ಸಂಗಡಿಗರು ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಗಮನಿಸಿದರೂ ಪೊಲೀಸ್ ಸಿಬ್ಬಂದಿ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಸ್ಥಳದಿಂದ ತೆರಳಿದ್ದಾರೆ ಎಂದು ದೂರಿದರು.

ಪುನಃ ಸಂಜೆ ಸಮಯದಲ್ಲಿ ಐದಾರು ಜನರ ಗುಂಪೊಂದು ಮನೆಯ ಬಳಿ ತೆರಳಿ ಪ್ರಕರಣ ಹಿಂಪಡೆ ಯಬೇಕು ಎಂದು ಜೀವಬೆದರಿಕೆ ಹಾಕಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಬಡ ಕ್ರೈಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಆರೋಪಿ ಮತ್ತು ಆತನ ಸಂಗಡಿಗರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ರಾಬರ್ಟ್, ಸ್ಥಳೀಯರಾದ ಸಗಯ್ ದಾಸ್, ಡ್ಯಾನಿ, ಆನಂದ್, ಜೋಸೆಫ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net