ಕ್ರೈಸ್ತರ ಮೇಲಿನ ದೌರ್ಜನ್ಯ ನಿಲ್ಲಲಿ

memo
Published on

ಬೀದರ್: ಮಣಿಪುರ ರಾಜ್ಯದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ ಮತ್ತು ದಾಳಿಗಳು ಹೆಚ್ಚುತ್ತಿವೆ. ಇದನ್ನು ತಡೆದು ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಜಿಲ್ಲಾ ಘಟಕ ಆಗ್ರಹಿಸಿದೆ.
ನಗರದಲ್ಲಿ ಪ್ರತಿಭಟನೆ ನಡೆಸಿದ ಪ್ರಮುಖರು, ಕ್ರೈಸ್ತರ ಮೇಲಿನ ದಾಳಿ ಖಂಡನೀಯ. ಬುಡಕಟ್ಟು ಜನರ ಮೀಸಲಾತಿ ವಿಚಾರವಾಗಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್ ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಕ್ರೈಸ್ತರ ಮೇಲೆ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯಲ್ಲಿ ಕ್ರೈಸ್ತ ಸಮಾಜದ ಹಲವರು ಪ್ರಾಣ ಕಳೆದುಕೊಂಡಿದ್ದು, ದಾಳಿ ತಡೆಯುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ. ಕ್ರೈಸ್ತರ ಮೇಲಾದ ದಾಳಿ, ಅತ್ಯಾಚಾರ, ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮೋಸೆಸ್ ನಿರ್ಣಾಕರ್, ಪ್ರದೀಪ ದಾದಾನೂರ, ವಿಶಾಲ ದಾದಾ, ಪಂಡಿತ ಭಾಗ್ಯಕರ್, ಸ್ಟೀವನ್ ಕುಶನೂರ, ಜಾನ್ ನಾಗೂರಕರ್, ಸುನೀಲ ಮೇತ್ರೆ, ಸಂಜುಕುಮರ ಮೇತ್ರೆ, ಸುರೇಶ ದೊಡ್ಡಿ ಇತರರಿದ್ದರು. ಕೇಂದ್ರ, ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net