ಕ್ರೈಸ್ತ ಅಭಿವೃದ್ಧಿ ನಿಗಮ ರಚಿಸಿ

Sanjay Jagirdar meet Srimant Patil & Joylus Desoza
Published on

ಬೀದರ್: ರಾಜ್ಯದಲ್ಲಿ ಕ್ರೈಸ್ತರ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ರಚಿಸಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಅವರನ್ನು ಭೇಟಿ ಮಾಡಿ ಈ ಕುರಿತು ಬೇಡಿಕೆ ಮಂಡಿಸಿದರು. ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ನಿಗಮ ಘೋಷಣೆ ಮಾಡಿ, ಪ್ರತಿ ಜಿಲ್ಲೆಯಲ್ಲೂ ಕಚೇರಿ, ಸಿಬ್ಬಂದಿ ನೇಮಕ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ರೂ. 500 ಕೋಟಿ ಅನುದಾನ ಮೀಸಲಿಡಬೇಕು ಎಂದು ಕೋರಿದರು.

ರಾಜ್ಯದಲ್ಲಿ ಕ್ರೈಸ್ತ ಸಮುದಾಯದ 60 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಸಮುದಾಯವನ್ನು ಮುಖ್ಯವಾಹಿನಿಗೆ ತರಲು ನಿಗಮದ ಅಗತ್ಯವಿದೆ ಎಂದು ಮನವರಿಕೆ ಮಾಡಿದರು.

ಚರ್ಚ್‍ಗಳ ಮೇಲೆ ದಾಳಿ ಹಾಗೂ ಕ್ರೈಸ್ತರ ಮೇಲಿನ ಹಲ್ಲೆ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜೋಯ್ಲಸ್ ಡಿಸೋಜಾ ಭೇಟಿ: ಕ್ರೈಸ್ತ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೋಯ್ಲಸ್ ಡಿಸೋಜಾ ಅವರನ್ನು ಭೇಟಿಯಾಗಿ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಗಮನಕ್ಕೆ ತಂದರು. ಕ್ರೈಸ್ತರಿಗೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಅನಿಲ್ ಥಾಮಸ್, ಹರಿ ಡಿಸೋಜಾ, ಫಾದರ್ ಸುನೀಲ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net