ಕ್ರೈನ್ ಡಿಕ್ಕಿಯಾಗಿ ಮಹಿಳೆ ಸಾವು

accident logo
Published on

ಹಾಸನ: ಚನ್ನರಾಯಪಟ್ಟಣ-ಮೈಸೂರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬುಧವಾರ ಕ್ರೈನ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ವನಜಾಕ್ಷಿ (45) ಮೃತ ಮಹಿಳೆ.

ಗ್ರಾಮದ ಕಾಳಮ್ಮ ಎಂಬುವವರು ಮೃತಪಟ್ಟಿದ್ದು, ಅಂತಿಮ ದರ್ಶನ ಪಡೆಯಲು ವನಜಾಕ್ಷಿ ಬುಧವಾರ ಬೆಳಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ-ಮೈಸೂರು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ಕಡೆಯಿಂದ ವೇಗವಾಗಿ ಕ್ರೈನ್ ಚಾಲನೆ ಮಾಡಿಕೊಂಡು ಬಂದ ಚಾಲಕ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ರಸ್ತೆಯ ಮೇಲೆ ಬಿದ್ದ ಮಹಿಳೆ ಮೇಲೆ ಕ್ರೈನ್ ಹರಿದು ಹೊಟ್ಟೆ ಹಾಗು ತಲೆಗೆ ಗಂಭೀರ ಸ್ವರೂಪ ಗಾಯವಾಗಿದೆ. ಕೂಡಲೇ ಅವರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಪಘಾತ ಮಾಡಿದ ಕ್ರೈನ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ವನಜಾಕ್ಷಿ ಮಗ ಯಶವಂತ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net