

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕ್ರೀಡೆ ದೇಹಕ್ಕೆ ಶಕ್ತಿ ನೀಡುವುದರ ಜತೆಗೆ ಮನಸ್ಸಿಗೆ ಶಾಂತಿ, ಜೀವನಕ್ಕೆ ಶಿಸ್ತು ಒದಗಿಸುತ್ತದೆ ಎಂದು ನಗರ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಈಸ್ಟ್‌ವೆಸ್ಟ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಕಣ್ವ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಅಯೋಜಿಸಿದ್ದ ಶಾಲಾ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ಕೇವಲ ಒಂದು ದಿನದ ಚಟುವಟಿಕೆಯಾಗದೆ, ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು.
ಕ್ರೀಡೆ ದೈಹಿಕ ಚಟುವಟಿಕೆ ಮಾತ್ರಯಲ್ಲ, ಅದು ಶಿಸ್ತು, ಪರಿಶ್ರಮ ಮತ್ತು ತಂಡದ ಶಕ್ತಿಯನ್ನು ಪ್ರದರ್ಶಿಸುವ ಒಂದು ಪ್ರಕ್ರಿಯೆ. ಉತ್ತಮ ಕ್ರೀಡಾಪಟುವಾಗಬೇಕಾದರೆ ನಿರಂತರ ಪರಿಶ್ರಮ, ಶಿಸ್ತು ಮತ್ತು ಕ್ರೀಡಾತಂತ್ರಗಳನ್ನು ಕರಗತ ಮಾಡಿಕೊಳ್ಳಬೇಕು ಎಂದರು.
ಶಿಕ್ಷಣವು ನಮ್ಮ ಜೀವನದ ದಿಕ್ಕನ್ನು ತೋರಿಸುವ ದೀಪದಂತೆ. ನಮ್ಮ ಜ್ಞಾನ ಮತ್ತು ಕೌಶಲಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಣ ಸಹಕಾರಿ. ಆದರೆ, ವಿದ್ಯೆ ಜತೆಗೆ ಕ್ರೀಡೆಯೂ ವಿದ್ಯಾರ್ಥಿಜೀವನದ ಭಾಗ ಎಂದರು.
ಕಣ್ವ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಮಂಜುಳಾ ಪುರುಷೋತ್ತಮ್ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆಗಳ ಸಮನ್ವಯವು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸಿಮೀತವಾಗದೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಶಾಲಾಡಳಿತವು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗಬೇಕು ಎಂದರು.
ಕಣ್ವ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕಿ ಲಾವಣ್ಯ ಮಾತನಾಡಿ, ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಲ್ಲ. ಅದು ಸಮಾನತೆ, ತಂಡದ ಒಗ್ಗಟ್ಟು ಮತ್ತು ಸಮಸ್ಯೆ ಬಗೆಹರಿಸುವ ಕೌಶಲವನ್ನು ಕಲಿಸುವ ಶ್ರೇಷ್ಠ ಮಾಧ್ಯಮವಾಗಿದೆ. ಕ್ರೀಡೋತ್ಸವವು ಕ್ರೀಡೆ ಮಹತ್ವ ಮತ್ತು ಪ್ರಭಾವವನ್ನು ಸಾರುತ್ತದೆ ಎಂದರು.
700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ: ಈಸ್ಟ್‌ವೆಸ್ಟ್ ಪಬ್ಲಿಕ್ ಸ್ಕೂಲ್ ಮಹಾಲಕ್ಷ್ಮೀ ಬಡಾವಣೆ, ಕಣ್ವ ಅಂತಾರಾಷ್ಟ್ರೀಯ ಶಾಲೆ ಕೊರಟಗೆರೆ ಹಾಗೂ ಕಣ್ವ ಪಬ್ಲಿಕ್ ಸ್ಕೂಲ್ ನೆಲಮಂಗಲದಿಂದ ಒಟ್ಟಾರೆ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, 20ಕ್ಕೂ ಹೆಚ್ಚು ವಿವಿಧ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಣ್ವ ಸಮೂಹ ಸಂಸ್ಥೆ ಕಾರ್ಯದರ್ಶಿ ರಜತ್ ಪಿ.ಗೌಡ, ಟ್ರಸ್ಟಿ ಶಮಂತ್ ಪಿ.ಗೌಡ, ಅನ್ನಪೂರ್ಣಾ ರಜತ್, ನಿರೀಕ್ಷಾ ಶಮಂತ್, ಕಣ್ವ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕಿ ಲಾವಣ್ಯ, ಮಹಾಲಕ್ಷ್ಮೀ ಬಡಾವಣೆಯ ಈಸ್ಟ್‌ವೆಸ್ಟ್ ಪಬ್ಲಿಕ್ ಸ್ಕೂಲ್ ಸ್ಫೂರ್ತಿ ಹರೀಶ್, ಕೊರಟಗೆರೆ ಕಣ್ವ ಶಾಲೆ ಮುಖ್ಯಶಿಕ್ಷಕಿ ಲತಾ ಇದ್ದರು.