

ಬೇಲೂರು: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಭೌತಿಕ, ಮಾನಸಿಕ ಹಾಗೂ ದೈಹಿಕ ದೃಢತೆ ಪಡೆಯಬಹುದು. ಅಲ್ಲದೇ, ಕ್ರೀಡೆ ಜೀವನದಲ್ಲಿ ಶಿಸ್ತು, ಸಂಯಮ ಕಲಿಸುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಹೇಳಿದರು.
ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ದಿವ್ಯ ಸಾಂಸ್ಕೃತಿ ಕಲಾ ವೈಭವ 2022-23ನೇ ಸಾಲಿನ ವಾರ್ಷಿಕೋತ್ಸವ, ಕ್ರೀಡಾ ದಿನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದಕ್ಕೆ ಪಾಲಕರು ಬೆಂಬಲ ನೀಡಬೇಕು. ಆಗ ಮಾತ್ರ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ. ಇಂದು ದೇಶದಲ್ಲಿ ಶೇ.60 ರಷ್ಟು ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಜೀವನ ಕ್ರಮವೇ ಕಾರಣ. ಆದ್ದರಿಂದ ಒತ್ತಡದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷಮೂರ್ತಿ ಮಾತನಾಡಿ, ಶಿಕ್ಷಣದಿಂದ ವ್ಯಕ್ತಿ ಹೇಗೆ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವೊ ಹಾಗೆಯೇ ಮನುಷ್ಯನ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಕಾರಣವಾಗಿದೆ. ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ದಿವ್ಯ ಸಾಂಸ್ಕೃತಿಕ ಕಲಾ ವೈಭವ 2022-23ರ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ದಿವ್ಯ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ, ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ವನಜಾಕ್ಷಿ, ಡಾ.ರಾಜ್‌ಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್, ಮುಖ್ಯ ಶಿಕ್ಷಕರಾದ ಉಮೇಶ್, ಚೇತನ್ ಕುಮಾರ್ ಇತರರಿದ್ದರು.