

ಕೆ.ಎಂ.ದೊಡ್ಡಿ: ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯ, ಭಾರತೀ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮೈಸೂರು ವಿವಿ ಅಂತರ ಕಾಲೇಜು ಮತ್ತು ಅಂತರ ವಲಯ ಮಹಿಳಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಿಂದ ಆರೋಗ್ಯ, ಆಯಸ್ಸು ವೃದ್ಧಿಯಾಗುತ್ತದೆ. ಅಲ್ಲದೆ ಮಾನಸಿಕ ಖಿನ್ನತೆಯಿಂದ ಹೊರಬರಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಕ್ರೀಡೆ ಆರೋಗ್ಯವಂತ ಜೀವನಕ್ಕೆ ಅವಶ್ಯಕ ಎಂದರು.
ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಸಿ.ಆರ್.ಸಂಧ್ಯಾ, ಕಬಡ್ಡಿ, ಖೋ-ಖೊ ಆಟಗಾರರಾದ ಕುಸುಮಾ, ಸ್ವರೂಪ, ರಾಧಿಕಾ, ಲಾವಣ್ಯ ಅವರನ್ನು ಸನ್ಮಾನಿಸಲಾಯಿತು. ಮೈಸೂರು ವಿವಿ ವ್ಯಾಪ್ತಿಯ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳ 50 ಕಾಲೇಜುಗಳಿಂದ ಒಟ್ಟು 700 ಕ್ರೀಡಾಪಟುಗಳು ಭಾಗವಹಿಸಿದ್ದರು.
ಮಾಜಿ ಸಂಸದ ಡಾ.ಜಿ.ಮಾದೇಗೌಡ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಕಾಲೇಜು ಪ್ರಾಂಶುಪಾಲ ಪ್ರೊ.ಮಾಯೀಗೌಡ, ಭಾರತೀ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ.ಎಸ್.ನಾಗರಾಜು, ಟ್ರಸ್ಟಿಗಳಾದ ಜೋಗೀಗೌಡ, ಚಂದೂಪುರ ಪಾಪಣ್ಣ, ಮುದ್ದಯ್ಯ, ಜಯರಾಮು ಹಲವರಿದ್ದರು.