ಕ್ರೀಡೆಯಿಂದ ಉತ್ತಮ ಆರೋಗ್ಯ:  ಪ್ಯಾರಾಒಲಿಂಪಿಕ್ಸ್ ಆಟಗಾರ ರಾಮಕೃಷ್ಣಯ್ಯ ಶ್ರೀನಿವಾಸ್

mysore
Published on

ಮೈಸೂರು: ಕ್ರೀಡಾ ಚಟುವಟಿಕೆಯಿಂದ ದೇಹದ ಆರೋಗ್ಯ ಉತ್ತಮವಾಗುತ್ತದೆ ಎಂದು ಅಂತಾರಾಷ್ಟ್ರೀಯ ಪ್ಯಾರಾಒಲಿಂಪಿಕ್ಸ್ ಆಟಗಾರ ರಾಮಕೃಷ್ಣಯ್ಯ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ಕಾನೂನು ಕಾಲೇಜು ವತಿಯಿಂದ ನಗರದ ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ ಕಾಲೇಜು ಟೇಬಲ್ ಟೆನಿಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಪಟುಗಳು ದೈಹಿಕ ಕ್ಷಮತೆಯನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ದೇಹದ ಸಧೃಡತೆಯನ್ನು ಕಾಪಾಡಿಕೊಳ್ಳಬಹುದು. ಇಂತಹ ಆರೋಗ್ಯವಂತ ಕ್ರೀಡಾಪಟುಗಳನ್ನು ನೋಡಿದಾಗ, ತಾವು ಅವರಂತೆ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕು,

ಅವರಂತೆ ಆರೋಗ್ಯಕರವಾಗಿ ಇರಬೇಕು ಎಂದು ಜನರ ಮನಸ್ಸಿನಲ್ಲಿ ಮೂಡುತ್ತದೆ. ಇಂತಹ ವಾತಾವರಣವನ್ನು ಉತ್ತೇಜನಗೊಳಿಸುವ ಕ್ರೀಡಾಪಟುಗಳು ಆರೋಗ್ಯ ರಾಯಭಾರಿಗಳಾಗಿ ಹೊರಹೊಮ್ಮಬಹುದು ಎಂದರು.

ಬೇರೆ ಎಲ್ಲ ಕ್ರೀಡೆಗೂ ಅಗತ್ಯಕ್ಕೆ ತಕ್ಕಂತೆ ಮೈದಾನ, ಸಾಧನೆ-ಸಲಕರಣೆಗಳು ಬೇಕು. ಆದರೆ ಟೇಬಲ್ ಟೆನಿಸ್ ಕ್ರೀಡೆಯೂ ಇದ್ಯಾವುದನ್ನು ಅಷ್ಟಾಗಿ ಬೇಡುವುದಿಲ್ಲ. ಮನೆಯ ಒಂದು ಮೂಲೆಯಲ್ಲಿ ಟೇಬಲ್ ಜೋಡಿಸಿಕೊಂಡು ಆಟವಾಡಬಹುದು. ದೊಡ್ಡವರು-ಚಿಕ್ಕವರು ಎನ್ನುವ ಭೇದ-ಭಾವವಿಲ್ಲದೇ ಎಲ್ಲರೂ ಸಮಾನವಾಗಿ ಭಾಗವಹಿಸಬಹುದು. ಟೇಬಲ್ ಟೆನಿಸ್ ಆಟದಿಂದ ಮನುಷ್ಯನ ಮಿದುಳು ಕ್ರಿಯಾಶೀಲವಾಗುತ್ತದೆ. ದೈನಂದಿನ ಚಟುವಟಿಕೆಯಲ್ಲಿ ಧನಾತ್ಮಕ ಪ್ರಕ್ರಿಯೆ ದೊರೆಯಲಿದೆ ಎಂದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಖಾಲಿದ್ ಖಾನ್ ಮಾತನಾಡಿ, ಬದಲಾದ ಜೀವನ ಶೈಲಿಯಿಂದಾಗಿ ಮನುಷ್ಯನಿಗೆ 40 ವರ್ಷ ದಾಟಿದ ಬಳಿಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮಾನಸಿಕ ಒತ್ತಡ, ಬೊಜ್ಜುತನ, ಖಿನ್ನತೆ, ಹೃದಯ ಸಂಬಂಧಿ ಕಾಯಿಲೆಗಳು ಅಧಿಕವಾಗಿವೆ. ಈ ಕಾಯಿಲೆಗಳು ಬಾರದಂತೆ ತಡೆಗಟ್ಟಬೇಕಾದರೆ ಹದಿಹರೆಯದಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಜೆಎಸ್‌ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಎನ್.ವಾಣಿಶ್ರೀ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರೇವಣ್ಣ, ಟೂರ್ನಿಯ ಸಂಚಾಲಕ ಸುರೇಶ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net