

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಅದೇ ರೀತಿಯ ಸಾಧನೆ ಕ್ರೀಡೆಯಲ್ಲೂ ಆಗಬೇಕು ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸಲಹೆ ನೀಡಿದರು.
ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆಯಿಂದ ಮಂಗಳವಾರ ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾಮಟ್ಟದ, ಅಂಗವಿಕಲ ಮಕ್ಕಳ ಮೇಲಾಟಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ, ಕ್ರೀಡೆ ಸೇರಿ ಇತರೆ ಚಟುವಟಿಕೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಸಾಧನೆ ಮಾಡುವ ಮೂಲಕ ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತರಲು ವಿದ್ಯಾರ್ಥಿಗಳು ಮುಂದಾಗಬೇಕು. ಅದಕ್ಕಾಗಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಾರುತೇಶ್ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದ್ದು, ಸೂಕ್ತ ತರಬೇತಿ ಪಡೆದರೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲು ಸಾಧ್ಯವಿದೆ. ಇದಕ್ಕೆ ನಿರಂತರ ಶ್ರಮ ಅಗತ್ಯ ಎಂದು ಸಲಹೆ ನೀಡಿದರು.
ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಕಾರ್ಯಾಧ್ಯಕ್ಷ ಎಸ್.ವೀರಣ್ಣ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಪರಶುರಾಮಪ್ಪ ಇತರರಿದ್ದರು.