

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಎಸ್. ಎಸ್. ಶೆಟ್ಟರ್ ಫೌಂಡೇಷನ್ನ ವೇದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಎರಡು ದಿನಗಳ ಕಾಲ ಸ್ಕೂಲ್ ಒಲಿಂಪಿಕ್ಸ್ ಆಯೋಜಿಸಲಾಗಿತ್ತು.
ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಮಾತನಾಡಿ, ಸೋಲು ಗೆಲುವು ಮುಖ್ಯವಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಕ್ರೀಡೆ ಒಂದು ಉತ್ತಮ ವೇದಿಕೆ. ಕ್ರೀಡೆ ದೇಹಕ್ಕೆ ಮತ್ತು ಮನಸ್ಸಿಗೆ ಆರೋಗ್ಯವನ್ನು ನೀಡುತ್ತದೆ ಎಂದು ಹೇಳಿದರು.
ಶೂಟಿಂಗ್ ತರಬೇತುದಾರ ರವಿಚಂದ್ರ ಬಾಲೆಹೊಸೂರು ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲೇ ಶಿಸ್ತು ಹಾಗೂ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ನಿರಂತರ ಅಭ್ಯಾಸ ಮತ್ತು ಶ್ರಮ ಮುಖ್ಯ ಎಂದರು.
ವೇದಾ ಶಾಲೆ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಬಾವುಟ ಹಿಡಿದುಕೊಂಡು ಪಥ ಸಂಚಲನ ನಡೆಸಿದರು.ವೇದಾ ಶಾಲೆಯ ವಿದ್ಯಾರ್ಥಿಗಳಿಂದ ಪಿರಾಮಿಡ್ ಪ್ರದರ್ಶನ ನಡೆಯಿತು.
ಜೆಎಸ್ಎಸ್ ಸಮಗ್ರ ಚಾಂಪಿಯನ್
ಗುಂಪು ಹಾಗೂ ವೈಯಕ್ತಿಕ ಆಟಗಳಲ್ಲಿ ಹೆಚ್ಚು ಪದಕಗಳನ್ನು ಜಯಿಸಿದ ಧಾರವಾಡ ಜೆಎಸ್ಎಸ್ ಮಂಜುನಾಥೇಶ್ವರ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆಯಿತು. ಗ್ರಾಮೀಣ, ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಯ 35 ಶಾಲೆಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಒಳಾಂಗಣ ಕ್ರೀಡೆಗಳಾದ ಕೇರಂ, ಟೇಬಲ್ ಟೆನಿಸ್, ಕರಾಟೆ, ಹೊರಾಂಗಣ ಕ್ರೀಡೆಗಳಾದ ಕಬಡ್ಡಿ, ವಾಲಿಬಾಲ್ ಹಾಗೂ ವೈಯಕ್ತಿಕ ಆಟಗಳಾದ ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಆಟಗಳಿದ್ದವು.
ಆಂಚಲ್ ಶೆಟ್ಟರ್, ಶಾಲೆಯ ಟ್ರಸ್ಟಿ ಶ್ರದ್ಧಾ ಸಂಕಲ್ಪ ಶೆಟ್ಟರ್, ಪ್ರಾಂಶುಪಾಲ ಬೀನಾ ಝಾನ್, ಆಡಳಿತಾಧಿಕಾರಿ ವಿಶಾಲ ಬಿನ್ನಾಳ, ಇತರರು ಉಪಸ್ಥಿತರಿದ್ದರು.