

ಬೇಲೂರು: ಮಕ್ಕಳು ಮೊಬೈಲ್ ಬಳಕೆಗೆ ಮುಂದಾಗದೆ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದರೆ ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಪಡೆಯಬಹುದು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ವೋದಯ ಪ್ರೌಢಶಾಲೆ ಸಹಯೋಗದಲ್ಲಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬೇಲೂರು ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವುದು ಮುಖ್ಯ. ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಹೊರತರುವುದಕ್ಕೆ ಇದೊಂದು ವೇದಿಕೆ. ಇಂತಹ ವೇದಿಕೆಯನ್ನು ವಿದ್ಯಾರ್ಥಿಗಳು ಸದೂಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮೂರಿನ ಕೀರ್ತಿ ಪತಾಕೆ ಹಾರಿಸಬೇಕು. ಆದರೆ ಇತ್ತೀಚಿನ ಸಾಕಷ್ಟು ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ವಿದ್ಯೆಯೊಂದಿಗೆ ಕ್ರೀಡೆಯ ಆಸಕ್ತಿ ಕಳೆದುಕೊಂಡು ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತಿದ್ದಾರೆ. ಇದನ್ನು ಬಿಟ್ಟು ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಛಾಪನ್ನು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿಯೇ ಬೇಲೂರು ತಾಲೂಕಿನ ಮಕ್ಕಳು ಕ್ರೀಡೆಯಲ್ಲಿ ಅಂತಾರಾಷ್ಟೀಯ ಮಟ್ಟದವರೆಗೂ ಗೆಲುವು ಸಾಧಿಸಿ ತಾಲೂಕಿಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕ ವೃಂದದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆಟದ ತೀರ್ಪುಗಾರರು ನೀಡುವ ತೀರ್ಪು ಮಕ್ಕಳಿಗೆ ಸ್ಫೂರ್ತಿ ತುಂಬುವಂತಿರಬೇಕು. ಅದೇ ರೀತಿ ಮಕ್ಕಳು ಸಹ ಆಟವಾಡುವಾಗ ಕ್ರೀಡಾ ಮನೋಭಾವದೊಂದಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆಗೆ ಮುಂದಾಗಬೇಕು ಎಂದರು.
ಸರ್ವೋದಯ ಪ್ರೌಢಶಾಲೆ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ಕ್ರೀಡೆಗೆ ಮಕ್ಕಳ ಮನಸ್ಸನ್ನು ಸಂತೋಷಪಡಿಸುವ ಶಕ್ತಿ ಇದೆ. ಕ್ರೀಡೆಯಲ್ಲಿ ಮೋಸದ ಗೆಲುವು ಕ್ಷಣಿಕ. ಇಂದಿನ ಕಾಲ ಘಟ್ಟದಲ್ಲಿ ಮೋಸದ ಗೆಲುವಿನಿಂದ ಏನನ್ನೂ ಸಾಧಿಸಲಾರರು. ಕ್ರೀಡಾಪಟುಗಳು ಸಂಘಟಿತ ಹಾಗೂ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಸಾಧನೆಗೆ ಮುಂದಾಗಬೇಕು. ಆದರೆ ಬೇಲೂರಿನಲ್ಲಿ ಕ್ರೀಡಾಂಗಣವಿದ್ದರೂ ಅದು ಕುಡುಕರ ಕೈಯಲ್ಲಿದೆ. ಮುಂದಿನ ದಿನಗಳಲ್ಲಿ ಶಾಸಕರು, ಜನಪ್ರತಿನಿಧಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಒಲವು ತೋರಬೇಕು ಎಂದರು.
ದೈಹಿಕ ಶಿಕ್ಷಣ ಪರೀಕ್ಷಕ ಪಾಲಾಕ್ಷ ಮೂರ್ತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಪ್ರೌಢಶಾಲಾ ಶಿಕ್ಷಕರ ಅಧ್ಯಕ್ಷ ಹೇಮಂತ್‌ಕುಮಾರ್, ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ನವೀನ್, ನೌಕರರ ಸಂಘದ ನಿರ್ದೇಶಕ ತಿಮ್ಮೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಭದ್ರೇಗೌಡ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪೇಂಟ್ ರವಿ ಸೇರಿದಂತೆ ಇತರರಿದ್ದರು.