

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನು ದೈನಂದಿನ ಜೀವನದಲ್ಲಿ ಕ್ರೀಡೆಗೆ ಸ್ವಲ್ಪ ಸಮಯ ಮೀಸಲಿಡಬೇಕು. ಕ್ರೀಡೆ ಕೇವಲ ಮನುಷ್ಯನ ದೈಹಿಕ ಬೆಳವಣಿಗೆ ಅಷ್ಟೇ ಅಲ್ಲದೆ, ಮಾನಸಿಕವಾಗಿಯೂ ಬೆಳೆಯಲು ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿ ರಾಜೇಂದ್ರ ಮೆಟಗುಡ್ಡ ಅಭಿಪ್ರಾಯಪಟ್ಟರು.
ನಗರದ ನೀರಲಕಟ್ಟಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಸಮಾರಂಭದಲ್ಲಿ ಮಾತನಾಡಿದರು.
ಆಟದಲ್ಲಿ ಕ್ರೀಡಾ ನಿಯಮವನ್ನು ಸರಿಯಾಗಿ ಪಾಲಿಸುವುದರಿಂದ ನಮ್ಮಲ್ಲಿ ಉತ್ತಮ ಗುಣ ಬೆಳೆಸಿಕೊಳ್ಳಬಹುದು. ಕ್ರೀಡೆಗೆ ಸರ್ಕಾರ ನೀಡುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ರೀತಿ ಕ್ರೀಡಾ ಸಾಧನೆ ಮಾಡಬೇಕು. ಅಂದಾಗ ಮಾತ್ರ ರಾಷ್ಟ್ರೀಯ ಕ್ರೀಡಾ ದಿನದ ಆಚರಣೆ ಸಾರ್ಥಕತೆ ಪಡೆಯಲಿದೆ ಎಂದರು.
ನಂತರ ಧ್ಯಾನ್‌ಚಂದ್ ಮತ್ತು ನೀರಜ್ ಚೋಪ್ರಾ ಕ್ರೀಡಾ ಸಾಧನೆ ಕುರಿತು ವಿಡಿಯೋ ಪ್ರದರ್ಶಿಸಲಾಯಿತು. ವಿದ್ಯಾ ಭಾರತಿ ಪ್ರಾಂತ ಮಟ್ಟದ ಕಬಡ್ಡಿ ಮತ್ತು ವಾಲ್ಹಬಾಲ್ ಪಂದ್ಯಾವಳಿ ವಿಜೇತರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯೆ ಡಾ. ಅನಿತಾ ರೈ, ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ, ಮಹೇಶ್ವರಯ್ಯ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.