ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ

Sports
Published on

ಚಿತ್ರದುರ್ಗ: ಕ್ರೀಡೆಗಳನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಿದರೆ, ಆಯೋಜಕರ ಉತ್ಸಾಹವೂ ಇಮ್ಮಡಿಗೊಳ್ಳಿದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದರು.

ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನಿಂದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನ ಆಯೋಜಿಸಿರುವ 25 ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ-2025 ಪ್ರೀಮಿಯರ್ ಲೀಗ್ ಸೀಸನ್-4 ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸೌಹಾರ್ದಯುತ ಭಾವನೆಯೊಂದಿಗೆ ಸ್ವೀಕರಿಸಬೇಕು. ಮುಂದಿನ ಬಾರಿ ನಡೆಸುವ ಇಂತಹ ಪಂದ್ಯಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸುವುದು ಉತ್ತಮ ಎಂದು ಕಿವಿಮಾತು ಹೇಳಿದರು.

ಮುಂಬರುವ ಹಿಂದು ಮಹಾಗಣಪತಿ ಉತ್ಸವದ ವೇಳೆ ಕಬಡ್ಡಿ ಆಯೋಜಿಸಿದರೆ ಲಕ್ಷಾಂತರ ಜನ ವೀಕ್ಷಿಸುವ ಸಾಧ್ಯತೆ ಇದೆ. ಯಾವುದೇ ಕ್ರೀಡೆಯಾಗಲಿ ಒಂದು ತಿಂಗಳ ಮುನ್ನ ನನ್ನ ಗಮನಕ್ಕೆ ತಂದರೆ ಪೂರಕವಾಗಿ ಬೆಂಬಲಿಸುವೆ. ದಾವಣಗೆರೆ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಚಿತ್ರದುರ್ಗದಲ್ಲೂ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಎಸ್‌ಬಿಐನ ವಿಭಾಗೀಯ ವ್ಯವಸ್ಥಾಪಕ ವೀರಯ್ಯ ಮಾತನಾಡಿ, ಗ್ರಾಮೀಣ ಸೊಗಡಿನ ದೇಸಿ ಕ್ರೀಡೆ ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಆಟಗಳಿಗೆ ಬೆಂಬಲ ಸಿಕ್ಕಾಗ ಮಾತ್ರ ಉತ್ತಮ ಕಬಡ್ಡಿ ಪಟುಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು.

ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಚಿತ್ರದುರ್ಗದಲ್ಲಿ ಆಗಿಂದಾಗ್ಗೆ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಮಂತಪ್ಪ, ಪತ್ರಕರ್ತ ಟಿ.ಕೆ. ಬಸವರಾಜ್, ತಾಪಂ ಮಾಜಿ ಸದಸ್ಯ ಸುರೇಶ್‌ನಾಯ್ಕ, ದೇವರಾಜ್, ಪರಶುರಾಂ, ದಾವಣಗೆರೆ ನಾಗರಾಜ್, ಚಂದ್ರಶೇಖರ್, ಶಿವಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net