

ಪಾಂಡವಪುರ: ಸರ್ಕಾರಿ ಶಾಲಾ ಮಕ್ಕಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅನುಕೂಲವಾಗುವಂತೆ ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ 2023-24 ಉದ್ಘಾಟಿಸಿ ಅವರು ಮಾತನಾಡಿದರು. ದಾನಿಗಳು ಮತ್ತು ಸರ್ಕಾರಿ ಶಾಲಾ ಶಿಕ್ಷಕರುಗಳೇ ಹಣ ಸಂಗ್ರಹಿಸಿ ಕ್ರೀಡಾಕೂಟಗಳನ್ನು ನಡೆಸುವ ವ್ಯವಸ್ಥೆ ಬದಲಾಗಬೇಕಿದೆ. ವಾರ್ಷಿಕವಾಗಿ ತಾಲೂಕು ಮಟ್ಟದಲ್ಲಿ ಆಯೋಜನೆಗೊಳ್ಳುವ ಶಾಲಾ ಕ್ರೀಡಾಕೂಟಗಳಿಗೆ ಸರ್ಕಾರ ನೇರ ಅನುದಾನ ನೀಡುವಂತಾಗಬೇಕು. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ಶಿಸ್ತು ಬಹಳ ಮುಖ್ಯ. ಶಿಸ್ತು ರೂಡಿಸಿಕೊಂಡರೆ ಜೀವನದಲ್ಲಿ ಏನಾದರು ಸಾಧನೆ ಮಾಡಬಹುದು. ಆಟೋಟ ಮತ್ತು ಕ್ರೀಯಾಶೀಲತೆ ಒಳ್ಳೆಯ ಮನಸ್ಸನ್ನು ರೂಪಿಸುತ್ತದೆ. ಮನಸ್ಸು ಚೆನ್ನಾಗಿದ್ದರೆ ಉತ್ತಮ ಆರೋಗ್ಯ ಪಡೆಯಬಹುದು ಎಂದು ಸಲಹೆ ನೀಡಿದರು.
ಕ್ರೀಡಾಕೂಟದಲ್ಲಿ ಕ್ಯಾತನಹಳ್ಳಿ, ಚಿನಕುರಳಿ, ಮೇಲುಕೋಟೆ ಸೇರಿದಂತೆ ವಿವಿಧ ವೃತ್ತದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ದೈಹಿಕ ಪರಿವೀಕ್ಷಕ ಎಸ್.ಬಸವರಾಜು, ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಶಿಕ್ಷಕರಾದ ಮಂಜುಳಾ, ಮೀನಾಕುಮಾರಿ, ಶಂಕರ್, ಕುಮಾರ್ ಇತರರಿದ್ದರು.