

ಹೊಸಕೋಟೆ: ದೇಸಿ ಕ್ರೀಡೆಗಳಿಂದ ಕ್ರೀಡಾಪಟುಗಳಲ್ಲಿ ಮಾನಸಿಕ ಹಾಗೂ ದೈಹಿಕ ಸದೃಢತೆ ಜತೆಗೆ ಪರಸ್ಪರ ಸಹೋದರತೆ ಬೆಳೆಸಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 3ನೇ ಎಸ್‌ಬಿಜಿ ಕಪ್ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದೂವರೆ ವರ್ಷಗಳಿಂದ ಕರೊನಾ ಮಹಾ ಮಾರಿಯಿಂದ ಕ್ರೀಡಾ ಲೋಕ ಮಂಕಾಗಿತ್ತು. ಕ್ರೀಡಾ ಪಟುಗಳಿಗೆ ಸರಿಯಾದ ಅಭ್ಯಾಸ ಪಂದ್ಯಗಳ ಜತೆಗೆ ವ್ಯಾಯಾಮ ಶಾಲೆಗಳಲ್ಲಿ ಕಸರತ್ತು ಮಾಡುವ ಅವಕಾಶ ಕರೊನಾ ಕಿತ್ತುಕೊಂಡಿತ್ತು. ಆದರೆ ಸದ್ಯ ಕರೊನಾ ಹಾವಳಿ ಕೊಂಚ ಕಡಿಮೆಯಾಗಿದ್ದು, ಮತ್ತೆ ಕ್ರೀಡಾಪಟುಗಳ ಮೊಗದಲ್ಲಿ ಹರ್ಷ ಕಾಣುವಂತಾಗಿದೆ ಎಂದರು.
ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ವರ್ಷಗಳಿಂದ ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮುಖಂಡ ಡಾ.ಎಚ್.ಎಂ. ಸುಬ್ಬರಾಜ್ ಮಾತನಾಡಿ, ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 30 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 15 ಸಾವಿರ ರೂ. ಜತೆಗೆ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಈ ಬಾರಿ ಮಂಡ್ಯ ಬಾಯ್ಸ ತಂಡ ಪ್ರಥಮ, ನೆಲಮಂಗಲದ ವಿಲೇಜ್ ಬಾಯ್ಸ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು ಎಂದರು.
ಮುಖಂಡರಾದ ವಿಜಯ್ ಕುಮಾರ್, ಚರಣ್, ಸುಭಾಷ್, ನಾಗರಾಜ್, ಸೋಮಶೇಖರ್, ಎಚ್.ಕೆ. ಮಂಜುನಾಥ್, ಆನಂದ್, ನಾರಾಯಣಸ್ವಾಮಿ, ರಾಕೇಶ್, ಸಂದೀಪ್ ಹಾಜರಿದ್ದರು.