

ಕೋಲಾರ: ನೌಕರರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಒತ್ತಡ ಮುಕ್ತರಾಗಬಹುದು ಎಂದು ಸಂಸದ ಮುನಿಸ್ವಾಮಿ ಸಲಹೆ ನೀಡಿದರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನೌಕರರು ಕರ್ತವ್ಯ ನಿರ್ವಹಿಸುವಾಗ ಒತ್ತಡ ಇದ್ದೇ ಇರುತ್ತದೆ. ಬಿಡುವಿನ ವೇಳೆಯಲ್ಲಿ ಜಮೀನಿದ್ದರೆ ಕೃಷಿ, ಇಲ್ಲದಿದ್ದರೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡದಿಂದ ಮುಕ್ತಿಹೊಂದಿ ಆರೋಗ್ಯವಂತರಾಗಿರಬಹುದು. ಕಚೇರಿಗಳಿಗೆ ಸಾರ್ವಜನಿಕರು, ಶೋಷಿತರು ಬಂದಾಗ ಅವರ ಕೆಲಸಗಳನ್ನು ಸರಿಯಾಗಿ ಮಾಡಿಕೊಡಲು ಇದು ಸಹಕಾರಿಯಾಗುತ್ತದೆ ಎಂದರು.
ರಾಷ್ಟ್ರದಲ್ಲಿ 135 ಕೋಟಿ ಜನಸಂಖ್ಯೆಯಿದ್ದೂ, ಕ್ರೀಡೆಗಳಲ್ಲಿ ಹಿಂದುಳಿದಿದ್ದೇವೆ. ಒಲಿಂಪಿಕ್ಸ್ನಲ್ಲಿ ಕೋಟಿಗೊಬ್ಬ ಕ್ರೀಡಾಪಟುವಿಗೆ ಚಿನ್ನದಪದಕ ಸಿಕ್ಕರೂ ಭಾರತ ವಿಶ್ವದಲ್ಲೇ ಮೊದಲಾಗುತ್ತದೆ. ಸರ್ಕಾರಿ ನೌಕರರು ಪ್ರತಿಭೆ ಇರುವ ಕ್ರೀಡಾಪಟುಗಳನ್ನು ದತ್ತು ಪಡೆದು ಪ್ರೋತ್ಸಾಹ ನೀಡಬೇಕು. ಜಿಲ್ಲೆಯಲ್ಲಿ 16 ಸಾವಿರ ನೌಕರರಿದ್ದು, ಸಾವಿರ ನೌಕರರು ಸೇರಿ ಒಬ್ಬ ಕ್ರೀಡಾಪಟುವಿಗೆ ಪ್ರೋತ್ಸಾಹ ನೀಡಿದರೆ ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ ಮೊದಲಸ್ಥಾನಕ್ಕೇರುತ್ತದೆ. ಜಿಲ್ಲೆಯವರು ಐಎಎಸ್, ಐಪಿಎಸ್, ವಕೀಲ ವೃತ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕ್ರೀಡಾಕ್ಷೇತ್ರವನ್ನೂ ಅದೇ ರೀತಿ ಮಾಡಲು ನೌಕರರು ಪಣ ತೊಡಬೇಕು ಎಂದು ಸಲಹೆ ನೀಡಿದರು.
ಖೇಲೋ ಇಂಡಿಯಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ದೇಶದ ಘನತೆ ಹೆಚ್ಚಿಸಲು ಕ್ರೀಡೆಗಳ ಅಗತ್ಯವಿದೆ ಎಂಬುದನ್ನು ಮನಗಂಡು ಕ್ರೀಡಾಪಟುಗಳಿಗೆ ಹೆಚ್ಚಿನ ನೆರವು ಒದಗಿಸಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸರ್ಕಾರಿ ನೌಕರರ ಭವನ ನವೀಕರಣ ಕಾಮಗಾರಿಗೆ ಸಂಸದರ ನಿಧಿಯಿಂದ 20 ಲಕ್ಷ ರೂ. ಒದಗಿಸಲಾಗುವುದು. ನೌಕರರು ಒಗ್ಗಟ್ಟು ಪ್ರದರ್ಶಿಸಬೇಕು. ಇತ್ತೀಚೆಗೆ ನಡೆದ ನೌಕರರ ದಿನಾಚರಣೆ ನೀರಸವಾಗಿತ್ತು. ಆದರೆ ಇಂದಿನ ಕ್ರೀಡಾಕೂಟ ಗುಂಪುಗಾರಿಕೆ ಇಲ್ಲದೆ ನಡೆದಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ನೌಕರರ ದಿನಾಚರಣೆಗೆ 10 ಸಾವಿರ ಮಂದಿ ಪಾಲ್ಗೊಳ್ಳುವಂತೆ ಮಾಡಿ ಎಂದರು.
ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಮಾತನಾಡಿ, ನೌಕರರ ಮನಸ್ಥಿತಿ ಚೆನ್ನಾಗಿದ್ದರೆ ಮಾತ್ರ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇದನ್ನು ಅರಿತು ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ನೌಕರರ ಭವನ ನವೀಕರಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ನೌಕರರ ಸಂಘಕ್ಕೆ 5 ಎಕರೆ ಜಮೀನು ಪಡೆದುಕೊಳ್ಳಲು ಮುಂದಾಗಿರುವುದಕ್ಕೆ ನನ್ನ ಸಹಮತವಿದ್ದು, ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಭವನ ನವೀಕರಣಕ್ಕೆ 10 ಲಕ್ಷ ರೂ.ನೀಡಲಾಗುವುದು. ಮುಂದಿನ ವರ್ಷದೊಳಗೆ ಹೊಸ ಭವನ ಸಿದ್ಧಗೊಂಡು ಅಲ್ಲೇ ಕಾರ್ಯಕ್ರಮ ಆಯೋಜಿಸಿ ಎಂದು ಹೇಳಿದರು.
ನೌಕರರಿಂದ ಪಥಸಂಚಲನ, ಕ್ರೀಡಾ ಪ್ರತಿಜ್ಞೆ ಸ್ವೀಕಾರ, ಕ್ರೀಡಾಧ್ವಜಾರೋಹಣ, ಕ್ರೀಡಾ ಸಾಧಕರಿಗೆ ಗೌರವ ಅರ್ಪಣೆ, ಕ್ರೀಡಾ ಜ್ಯೋತಿಯ ಮೆರವಣಿಗೆ ಗಮನಸೆಳೆದವು.
ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಸಿಂಡಿಕೇಟ್ ಸದಸ್ಯ ಉದಯಕುಮಾರ್, ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು, ಯುವಸಬಲೀಕರಣ ಸಹಾಯಕ ನಿರ್ದೇಶಕಿ ಶಶಿಕಲಾ, ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಕಾರ್ಯಾಧ್ಯಕ್ಷ ಎನ್. ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷ ಸುಬ್ರಮಣಿ, ಕ್ರೀಡಾ ಕಾರ್ಯದರ್ಶಿ ಚಂದ್ರಕಲಾ, ಸಾಂಸತಿಕ ಕಾರ್ಯದರ್ಶಿ ಡಾ. ಇಂಚರ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷರುಗಳಾದ ರವಿರೆಡ್ಡಿ, ಅಪ್ಪೇಗೌಡ, ಮುನೇಗೌಡ ಇತರರು ಇದ್ದರು.
ಜಿಲ್ಲೆಯು ಅಭಿವೃದ್ಧಿಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗುವಂತೆ ಅಧಿಕಾರಿಗಳು ಕರ್ತವ್ಯನಿರ್ವಹಿಸಬೇಕು. ಕಚೇರಿಗಳಿಗೆ ಅಲೆದಾಟ ತಪ್ಪಿಸಿ, ಜನರ ಸೇವೆ ಮಾಡಬೇಕು. ವೆಂಕಟ್ ರಾಜಾ, ಜಿಲ್ಲಾಧಿಕಾರ