ಕ್ರೀಡೆಗಳ ಅಭಿವೃದ್ಧಿಗೆ ಪಾಲಕರ ಪ್ರೋತ್ಸಾಹ ಅಗತ್ಯ

20rajesh4
Published on

ಚಾಮರಾಜನಗರ: ಜಿಲ್ಲೆಯಲ್ಲಿ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಕ್ರೀಡೆಗಳತ್ತಾ ಆಸಕ್ತಿ ತೋರುತ್ತಿದ್ದು, ಪಾಲಕರಿಂದ ಅಗತ್ಯ ಪ್ರೋತ್ಸಾಹ ದೊರೆಯಬೇಕಿದೆ ಎಂದು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಚಾಲೆಂಜರ್ಸ್ ಸ್ಕೇಟಿಂಗ್ ಅಕಾಡೆಮಿ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವಿವಿಧ ಕ್ರೀಡೆಗಳನ್ನು ಅಭಿವೃದ್ಧಿ ಪಡಿಸಲು ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ಆಟೋಟ ಸ್ಪರ್ಧೆಗಳ ತೆಗೆ ತರಬೇತಿಗಳನ್ನು ನೀಡಲು ಮುಂದೆ ಬಂದರೆ ಇಲಾಖೆ ವತಿಯಿಂದ ಸ್ವಾಗತ ಕೋರುತ್ತೇನೆ. ಇಲಾಖೆಯಿಂದ ಸಿಗಬೇಕಾದಂತಹ ಸವಲತ್ತನ್ನು ದೊರಕಿಸಲು ಇಲಾಖೆ ಸಿದ್ದವಿದೆ ಎಂದರು.

ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ 17 ಕೋಟಿ ರೂ.ಗಳನ್ನು ವಿವಿಧ ಕ್ರೀಡೆಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದು, ವಿವಿಧ ಅಂಕಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಸ್ಕೇಟಿಂಗ್‌ರಿಂಗ್, ನೆಟ್‌ಬಾಲ್, ಬ್ಯಾಸ್ಕೇಟ್ ಬಾಲ್ ಸೇರಿದಂತೆ ವಿವಿಧ ಅಂಕಣಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದರ ತೆಗೆ ಸ್ಥಗಿತಗೊಂಡಿರುವ ಈಜುಕೊಳವನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನೆಟ್‌ಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷೆ ನರ್ಗೀಸ್‌ಬಾನು, ಜಿಲ್ಲಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಅಜೀಮ್, ಸೂಫಿ ರೋಷನ್, ಚಾಲೆಂಜರ್ಸ್ ಸ್ಕೇಟಿಂಗ್ ಅಕಾಡೆಮಿಯ ತರಬೇತುದಾರ ಫುರ್ಖಾನ್ ಪಾಷಾ, ಮಹಮ್ಮದ್ ಇದ್ರಿಸ್ ಸಾಹೇಬ್, ಅಬ್ದುಲ್ ಅಜೀಜ್, ರೇಹಾನ್, ಕ್ರೀಡಾ ಇಲಾಖೆ ಮಂಜುನಾಥ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net