

ಹುಣಸೂರು: ತಾಲೂಕಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ 2023-24ನೇ ಸಾಲಿನ ಪ್ರಾಥಮಿಕ ಶಾಲಾ ಮಟ್ಟದ ಶೈಕ್ಷಣಿಕ ಚಟುವಟಿಕೆಗಳ ಕುರಿತಾಗಿ ಚರ್ಚಿಸಲು ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದ್ದಾರೆ ಎನ್ನುವುದನ್ನು ಬಲ್ಲೆ. ಆದರೆ ಪ್ರತಿಭೆಗಳನ್ನು ಗುರುತಿಸಿ ಹೊರಪ್ರಪಂಚಕ್ಕೆ ಪರಿಚಯಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ದೇಶಕಟ್ಟುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಮಕ್ಕಳನ್ನು ಕೇವಲ ಪಠ್ಯಪುಸ್ತಕದ ಹುಳುವಾಗಲು ಬಿಡದೆ, ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಮತ್ತು ಕೌಶಲವನ್ನು ಗುರುತಿಸಿ ಬೆಳೆಸುವ ಜವಾಬ್ದಾರಿಯನ್ನು ಶಿಕ್ಷಕರು ಹೊರಬೇಕು. ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕುರಿತಾಗಿ ವಿಶೇಷ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದೇನೆ ಎಂದರು.
ಸಮಸ್ಯೆಗೆ ಸದಾ ಸ್ಪಂದಿಸುವೆ: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.93ರ ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಹುಣಸೂರು 3ನೇ ಸ್ಥಾನ ಗಳಿಸಿರುವುದು ಶ್ಲಾಘನೀಯ. ಆದರೆ ಮಿಕ್ಕ ಶೇ.7 ವಿದ್ಯಾರ್ಥಿಗಳ ಕುರಿತು ಶಿಕ್ಷಕರು ಗಮನಿಸುವುದು ಅಗತ್ಯ. ದಿನನಿತ್ಯದ ನಿಮ್ಮ ಕರ್ತವ್ಯದ ಅವಧಿಯಲ್ಲಿ ಹೆಚ್ಚುವರಿಯಾಗಿ ಅರ್ಧ ತಾಸು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿನಿಯೋಗಿಸಿರಿ. ಆ ಮಕ್ಕಳನ್ನು ಮುಖ್ಯವಾಹಿನಿಗೆ ತರುವು ಕಾರ್ಯ ನಿಮ್ಮಿಂದಾಗಲಿ. ಕಳೆದ 4 ವರ್ಷಗಳಿಂದ ಶಿಕ್ಷಕರ ವೈದ್ಯಕೀಯ ಭತ್ಯೆ 2 ಕೋಟಿ ರೂ.ಗಳು ಸರ್ಕಾರದಿಂದ ಬಾಕಿ ಬರಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದು, ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕೊಡಿಸುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸುವತ್ತ ನಾನು ಸದಾ ನಿಮ್ಮೊಂದಿಗಿದ್ದೇನೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹುಣಸೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಬೇಕು ಎನ್ನುವುದು ನನ್ನಾಸೆ. ಇದಕ್ಕಾಗಿ ಎಲ್ಲರೂ ಒಂದಾಗಿ ದುಡಿಯೋಣವೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ತಾಲೂಕಿನಲ್ಲಿ ಒಟ್ಟು 396 ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿದ್ದು, 41,948 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ಕೊಠಡಿಯನ್ನು ಹೊಂದಿದ 8 ಶಾಲೆಗಳಿವೆ. 140 ಶಾಲೆಗಳ 307 ಕೊಠಡಿಗಳು ದುರಸ್ತಿಯಾಗಬೇಕಿದೆ. 65 ಶಾಲೆಗಳಲ್ಲಿ 115 ಕೊಠಡಿಗಳು ಅಗತ್ಯವಾಗಿ ನೆಲಸಮವಾಗಬೇಕಿದೆ. 27 ಶಾಲೆಗಳಲ್ಲಿ ತಲಾ 30 ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳ ಶೌಚಗೃಹ ನಿರ್ಮಾಣವಾಗಬೇಕಿದೆ. ಹೊಸದಾಗಿ 96 ಶೌಚಗೃಹಗಳು ನಿರ್ಮಾಣವಾಗಬೇಕಿದೆ. 45 ಶಾಲೆಗಳಲ್ಲಿ ಕಾಂಪೌಂಡ್ ಆಗಬೇಕಿದೆ. 256 ಶಿಕ್ಷಕರ ಕೊರತೆಯಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕರು ಆದ್ಯತೆ ಮೇಲೆ ಶಿಕ್ಷಣ ಕ್ಷೇತ್ರವನ್ನು ಆಯ್ದುಕೊಂಡು ಸಹಕರಿಸಬೇಕೆಂದು ಕೋರಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಜೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ, ಟಿ.ರಂಗಸ್ವಾಮಿ, ಚಿನ್ನವೀರಪ್ಪ, ನಂದೀಶ್, ಬಿಆರ್‌ಪಿ, ಸಿಆರ್‌ಪಿ, ಬಿಇಐಆರ್‌ಟಿ, ಮುಖ್ಯಶಿಕ್ಷಕರು ಹಾಜರಿದ್ದರು. ಶಿಕ್ಷಕರ ವಿವಿಧ ಸಂಘಗಳಿಂದ ನೂತನ ಶಾಸಕರನ್ನು ಸನ್ಮಾನಿಸಲಾಯಿತು.